ಬಾಲಿವುಡ್ ಖ್ಯಾತ ಗಾಯಕ ಮತ್ತು ರ‍್ಯಾಪರ್ ಹನಿ ಸಿಂಗ್ ಹಲ್ಲೆ ಆರೋಪ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಕಾರ್ಯಕ್ರಮವೊಂದರ ಸಂಘಟಕರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಯೋ ಯೋ ಹನಿ ಸಿಂಗ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಹನಿ ಸಿಂಗ್ ಮತ್ತು ಇತರೆ ಕೆಲವರ ವಿರುದ್ಧ ವಿವೇಕ್ ರಾಮನ್ ಎಂಬ ವ್ಯಕ್ತಿ ಲಿಖಿತ ದೂರನ್ನು ದಾಖಲಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. "ಈವೆಂಟ್ಗಳನ್ನು ಆಯೋಜಿಸುವ ಕಂಪನಿಯೊಂದರ ಮಾಲೀಕ ವಿವೇಕ್ ರಾಮನ್ ಅವರು, ಹನಿ ಸಿಂಗ್ ಮತ್ತು ಇತರರ ವಿರುದ್ಧ ಅಪಹರಣ, ಸೆರೆಯಲ್ಲಿಟ್ಟು ಹಲ್ಲೆ ಮಾಡಿದ ಆರೋಪದಲ್ಲಿ ದೂರು ದಾಖಲಿಸಿದ್ದಾರೆ" ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರ‍್ಯಾಪರ್ ಹನಿ ಸಿಂಗ್ ತಮ್ಮನ್ನು ಅಪಹರಿಸಿ, ಸೆರೆಯಲ್ಲಿಟ್ಟು, ನಗರದ ಹೊರವಲಯದಲ್ಲಿರುವ ಮುಂಬೈ ಹೋಟೆಲ್‌ನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ವಿವೇಕ್ ರಾಮನ್ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಏಪ್ರಿಲ್ 19 (ಬುಧವಾರ)ರಂದು ನೀಡಿದ ದೂರಿನ ಪ್ರಕಾರ, ದೂರುದಾರ ರಾಮನ್ ಅವರು ಏಪ್ರಿಲ್ 15 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನಲ್ಲಿ ಹನಿ ಸಿಂಗ್ ಅವರಿಗಾಗಿ ಈವೆಂಟ್ ಒಂದನ್ನು ಆಯೋಜಿಸಿದ್ದರು. ಹಣದ ವ್ಯವಹಾರದಲ್ಲಿ ಕೆಲ ಏರು ಪೇರಾಗಿ ಕಾರ್ಯಕ್ರಮ ರದ್ದುಗೊಳಿಸಲಾಯಿತು.