ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯಲ್ಲಿ ಕನ್ನಡದ ಕೀರ್ತಿ ಎತ್ತಿ ಹಿಡಿದಿರುವ ನಟ ಕಿಚ್ಚ ಸುದೀಪ್, ಕ್ರಿಕೆಟ್ ಆಟಗಾರ ಆಗಬೇಕು ಎಂದುಕೊಂಡಿದ್ದವರು. ಆದರೆ, ಈಗ ಭಾರತೀಯ ಸಿನಿಮಾರಂಗದಲ್ಲಿ ಸ್ಟಾರ್ ಆಗಿರೋದು ಇತಿಹಾಸ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಸುದೀಪ್ ಕೋಟ್ಯಂತರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಸದ್ಯ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸಾವಿರಾರು ಅಭಿಮಾನಿಗಳ ಜೊತೆ ಈ ವರ್ಷ ತಮ್ಮ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ.
ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಅವರು ಬಣ್ಣದ ಜಗತ್ತಿನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡವರು. ಕಷ್ಟದ ದಿನಗಳನ್ನು ಮೆಟ್ಟಿ ಸ್ಯಾಂಡಲ್ವುಡ್ ಬಾದ್ಷಾ ಎನಿಸಿಕೊಂಡಿದ್ದಾರೆ. ಇನ್ನು ಪ್ರತಿಯೊಬ್ಬ ಸ್ಟಾರ್ ನಟನ ಸಿನಿ ಕರಿಯರ್ನಲ್ಲಿ ಒಂದೊಂದು ಸಿನಿಮಾಗಳು ಒಂದೊಂದು ಮಹತ್ವ ಹೊಂದಿರುತ್ತದೆ. ಅದೇ ರೀತಿ ಕಿಚ್ಚನ ಸಿನಿ ಕೆರಿಯರ್ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡಿದ ಸಿನಿಮಾಗಳ ಕಹಾನಿ ಹೀಗಿದೆ.
ಸುದೀಪ್ ಬಣ್ಣ ಹಚ್ಚಿದ್ದು ಮೊದಲು 'ಬ್ರಹ್ಮ' ಚಿತ್ರಕ್ಕಾದರೂ ಈ ಸಿನಿಮಾ ಪೂರ್ತಿಯಾಗಲಿಲ್ಲ. ನಂತರ 1997 ರಲ್ಲಿ 'ತಾಯವ್ವ' ಚಿತ್ರದ ಮೂಲಕ ತೆರೆಗೆ ಬರುತ್ತಾರೆ. ಆದರೆ, ಇದು ಸುದೀಪ್ಗೆ ಹೇಳಿಕೊಳ್ಳುವಂತ ಹೆಸರು ನೀಡಲಿಲ್ಲ. 'ಪ್ರತ್ಯರ್ಥ' ಚಿತ್ರ ಕೂಡಾ ಬ್ರೇಕ್ ನೀಡದಿದ್ದಾಗ ಸುದೀಪ್, ಈ ಚಿತ್ರರಂಗದ ಸಹವಾಸವೇ ಸಾಕು ಎಂದು ನಿರ್ಧರಿಸಿದವರು.
ಆ ವೇಳೆ ಸುನಿಲ್ ಕುಮಾರ್ ದೇಸಾಯಿ ಅವರ 'ಸ್ಪರ್ಶ' ಅವರನ್ನು ಹಿಡಿದು ನಿಲ್ಲಿಸುತ್ತದೆ. ಸುದೀಪ್ ತಂದೆ ಸಂಜೀವ್ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂ. ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಸುದೀಪ್ ಜೊತೆ ರೇಖಾ, ಸುಧಾರಾಣಿ ನಟಿಸಿದ್ದರು. ಚಿತ್ರ ಸುಮಾರು 4 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಅದಾದ ಬಳಿಕ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ್ದು ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾ. ಈ ಚಿತ್ರ ಅವರನ್ನು ಸ್ಟಾರ್ ಹೀರೋ ಮಾಡಿತು. 2001ರಲ್ಲಿ ತೆರೆಕಂಡ ಈ ಸಿನಿಮಾವನ್ನು ರೆಹಮಾನ್ ಎಂಬ ನಿರ್ದೇಶಕ ಸುಮಾರು 2 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ಸುದೀಪ್ ಅದ್ಭುತ ನಟ ಎಂಬುದು ಎಲ್ಲರಿಗೂ ತಿಳಿಯಿತು. ಆ ವೇಳೆ ಸಿನಿಮಾ 5 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಚಂದು, ಧಮ್, ಸ್ವಾತಿಮುತ್ತು ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡಿದ್ದ ಸುದೀಪ್, ನಟ ಮಾತ್ರವಲ್ಲ ನಿರ್ದೇಶಕರಾಗಿಯೂ ಗುರುತಿಸಿಕೊಂಡರು. 'ಮೈ ಆಟೋಗ್ರಾಫ್' ಚಿತ್ರದ ಮೂಲಕ ನಿರ್ದೇಶಕನ ಸ್ಥಾನವನ್ನು ತುಂಬಿದರು. ಈ ಚಿತ್ರದ ಮೂಲಕ ಆ್ಯಕ್ಟರ್, ಡೈರಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಕೂಡಾ ಗುರುತಿಸಿಕೊಂಡರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುದೀಪ್ ಈ ಚಿತ್ರವನ್ನು ತಾವೇ ನಿರ್ಮಿಸಿದ್ದರು. 2006 ರಲ್ಲಿ ಸುಮಾರು 2 ಕೋಟಿ ರೂ. ಬಜೆಟ್ನಲ್ಲಿ ತಯಾರಾದ 'ಮೈ ಆಟೋಗ್ರಾಫ್' 6 ಕೋಟಿ ರೂ. ಲಾಭ ಮಾಡಿತು.
ಕಿಚ್ಚ ಖಾಕಿ ತೊಟ್ಟು ಅಬ್ಬರಿಸಿದ ಸಿನಿಮಾ 'ವೀರ ಮದಕರಿ'. 2009 ರಲ್ಲಿ ತೆರೆ ಕಂಡ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕಾಗಿ ಸುದೀಪ್ ತೂಕ ಇಳಿಸಿಕೊಂಡು ಬಹಳ ಸಣ್ಣ ಆಗಿದ್ದರು. ಇದು ರಾಗಿಣಿ ಅವರ ಮೊದಲ ಸಿನಿಮಾ ಕೂಡಾ. 4 ಕೋಟಿಯ ಈ ಸಿನಿಮಾ ಬಾಚಿಕೊಂಡದ್ದು 8 ಕೋಟಿ ರೂಪಾಯಿ. ಬಳಿಕ ಕಾಮಣ್ಣನ ಮಕ್ಕಳು, ಫೂಂಕ್ (ಹಿಂದಿ ಸಿನಿಮಾ) ನಂತರ ಮತ್ತೆ ಸುದೀಪ್ ಖಾಕಿ ತೊಟ್ಟದ್ದು 'ಕೆಂಪೇಗೌಡ' ಚಿತ್ರದಲ್ಲಿ. ಶಂಕರೇಗೌಡ ನಿರ್ಮಾಣದ ಈ ಚಿತ್ರದಲ್ಲಿ ಮತ್ತೆ ರಾಗಿಣಿ ಸುದೀಪ್ ಜೊತೆ ಡ್ಯೂಯೆಟ್ ಹಾಡಿದ್ದರು. 7ಕೋಟಿ ರೂ. ಸಿನಿಮಾ ಬಾಕ್ಸ್ ಆಫೀಸಿನಲ್ಲಿ 11 ಕೋಟಿ ರೂ. ಗಳಿಸಿತ್ತು.