ಕನ್ನಡ ಚಿತ್ರರಂಗ ಅಲ್ಲದೇ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ ಡಮ್ ಹೊಂದಿರುವ ನಟ ಕಿಚ್ಚ ಸುದೀಪ್. ಅದ್ಭುತ ನಟನೆ ಮೂಲಕ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿದ್ದಾರೆ. ಸದ್ಯ ಕಿಚ್ಚ ಚುನಾವಣಾ ಅಖಾಡಲ್ಲಿ ಘರ್ಜಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪರ ಮತ ಬೇಟೆಗೆ ಇಳಿದಿರುವ ಸುದೀಪ್ ಇನ್ನೂ 15 ದಿನಗಳ ಕಾಲ ಬಿರು ಬಿಸಿಲಿನಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.
ಸಿಸಿಲ್ ಹಾಗೂ ಕೆಸಿಎಲ್ ಕ್ರಿಕೆಟ್ ಮ್ಯಾಚ್ ಮುಗಿಸಿ ರಿಲ್ಯಾಕ್ಸ್ ಮೂಡ್ನಲ್ಲಿರೋ 'ಹೆಬ್ಬುಲಿ'ಯ ಮುಂದಿನ ಸಿನಿಮಾ ಬಗ್ಗೆ ಕಿಚ್ಚನ ಜೆ.ಪಿ ನಗರದ ನಿವಾಸದಿಂದ ಹಿಡಿದು ಇಡೀ ಸೌತ್ ಸಿನಿಮಾ ಇಂಡಸ್ಟ್ರಿವರೆಗೂ ಟಾಕ್ ಆಗುತ್ತಿದೆ. ವಿಕ್ರಾಂತ್ ರೋಣ ಆಯ್ತು, ಮುಂದಿನ ಸಿನಿಮಾ ಯಾವುದು? ಯಾವ ನಿರ್ದೇಶಕರು ಅಭಿನಯ ಚಕ್ರವರ್ತಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ? ತಮ್ಮ ಮೆಚ್ಚಿನ ನಟನೊಂದಿಗೆ ತೆರೆ ಹಂಚಿಕೊಳ್ಳಲಿರುವ ಆ ಚೆಲುವೆ ಯಾರು? ಯಾವ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ.
ಸುದೀಪ್ ಮುಂದಿನ ಸಿನಿಮಾ ಯಾರ ಜೊತೆ ಅಂತಾ ಅಂದಾಜು ಮಾಡುತ್ತಿರುವ ಈ ಹೊತ್ತಿನಲ್ಲಿ ತಮಿಳು ಚಿತ್ರರಂಗದದಿಂದ ದೊಡ್ಡ ಹೆಸರು ಕೇಳಿ ಬಂದಿದೆ. ಒಂದಲ್ಲ, ಎರಡಲ್ಲ ಮೂರು ನ್ಯಾಷನಲ್ ಅವಾರ್ಡ್ ಗೆದ್ದುಕೊಂಡಿರೋ ತಮಿಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಚರಣ್ ಜೊತೆ ಸುದೀಪ್ ಸಿನಿಮಾ ಮಾಡೋಕೆ ಸಜ್ಜಾಗುತ್ತಿದ್ದಾರೆ.
ಹೌದು, ಚರಣ್ ಕಳೆದ ಮೂರು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ನಟನೆ ಜೊತೆ ನಿರ್ದೇಶನದಲ್ಲೂ ಕಮಾಲ್ ಮಾಡಿದ್ದಾರೆ. ಈವರೆಗೆ 12 ಚಿತ್ರಗಳನ್ನು ನಿರ್ದೇಶಿಸಿರುವ ಚರಣ್, ವೆಟ್ರಿ ಕೊಡಿ ಕಟ್ಟು, ಆಟೋಗ್ರಾಫ್, ತವಮೈ ತವಮಿರುಂದು ಚಿತ್ರಗಳ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇದೀಗ ಅದ್ಭುತ ಕಥೆಯೊಂದನ್ನು ಸಿದ್ಧಪಡಿಸಿರುವ ಚರಣ್, ಕನ್ನಡದ ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳೋಕೆ ಮುಂದಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಟು ಸ್ಯಾಂಡಲ್ವುಡ್ ಸಂಚರಿಸಿ ಸದ್ದು ಮಾಡುತ್ತಿದೆ.