ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದು ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಉಪೇಂದ್ರ ಅಭಿನಯದ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಐ ಯಾಮ್ ಆರ್ ಎಂಬ ಸಿನೆಮಾ ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಿಚ್ಚ ಸುದೀಪ್, ಪ್ಯಾನ್ ಇಂಡಿಯಾ ವಿಚಾರವಾಗಿ ಮಾತನಾಡಿದ್ದರು. ಈ ವೇಳೆ ಹಿಂದಿ ರಾಷ್ಟ್ರ ಭಾಷೆಯಲ್ಲ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ಮಾಣ ಆಗುವ ಸಿನೆಮಾಗಳು ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ಇಂಡಿಯಾ ಪದವನ್ನು ಬಳಸಬೇಡಿ ಎಂದು ಹೇಳಿದ್ದರು.
ಈ ಬಗ್ಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದು, ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ, ನಿಮ್ಮ ಮಾತೃ ಭಾಷೆಯಲ್ಲೇ ಚಿತ್ರಗಳನ್ನು ಬಿಡುಗಡೆ ಮಾಡಿ, ಯಾಕೆ ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡುತ್ತಿದ್ದೀರಾ? ಹಿಂದಿ ನಮಗೆ ಯಾವಾಗಲೂ ಮಾತೃಭಾಷೆ ಆಗಿರುತ್ತದೆ. ಹಿಂದಿ ರಾಷ್ಟ್ರ ಭಾಷೆ ಎಂದು ಹೇಳುವ ಮೂಲಕ ಅಜಯ್ ದೇವಗನ್ ಸುದೀಪ್ಗೆ ತಿರುಗೇಟು ನೀಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದು, ಅಜಯ್ ದೇವಗನ್ ಪಾನ್ ಮಸಾಲಾ ತಿಂದು ನಶೆಯಲ್ಲಿದ್ದಾರೆ ಎಂದು ಕಾಲು ಎಳೆದಿದ್ದಾರೆ. ಸದ್ಯ ಈ ವಿಚಾರವಾಗಿ ಕನ್ನಡ ಚಿತ್ರರಂಗದ ನಟ, ನಟಿಯರು ಹಾಗು ನಿರ್ದೇಶಕರು ಸುದೀಪ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಈ ಬಗ್ಗೆ ಟ್ಟೀಟ್ ಮಾಡಿರೋ ಮೋಹಕ ತಾರೆ ರಮ್ಯಾ, ಅಜಯ್ ದೇವಗನ್ ಅವರೇ ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅದು ನಿಮ್ಮ ಅಜ್ಞಾನ. ಕೆಜಿಎಫ್, ಆರ್.ಆರ್.ಆರ್ ಹಾಗು ಪುಷ್ಪ ಸಿನಿಮಾಗಳು ಹಿಂದಿಗೆ ಡಬ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಕಲೆಗೆ ಯಾವುದೇ ಗಡಿ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತಿವೆ. ನೀವು ನಮ್ಮ ಸಿನಿಮಾಗಳನ್ನು ನೋಡಿ ಸಂತೋಷಪಡಿ, ನಾವು ನಿಮ್ಮ ಸಿನಿಮಾಗಳನ್ನು ನೋಡಿ ಸಂತೋಷ ಪಡುತ್ತೇವೆ ಎಂದು ಹೇಳಿದ್ದಾರೆ.