ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಗಧೀರ, ಬಾಹುಬಲಿ, ಆರ್ಆರ್ಆರ್ನಂತಹ ಸೂಪರ್ ಹಿಟ್ ಚಿತ್ರಗಳ ಕಥೆಗಾರ ವಿ.ವಿಜಯೇಂದ್ರ ಪ್ರಸಾದ್. ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಎಸ್.ಎಸ್.ರಾಜಮೌಳಿ ಅವರ ಎಲ್ಲಾ ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಇವರು ಕನ್ನಡದ ಪ್ರತಿಷ್ಠಿತ ಆರ್.ಸಿ.ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸುದೀಪ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕಬ್ಜ' ಚಿತ್ರವನ್ನು ಸಕ್ಸಸ್ ಮಾಡಿದ ನಿರ್ದೇಶಕ ಆರ್.ಚಂದ್ರು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಸೂಪರ್ ಕಾಪ್ ಆಗಿ ಅಭಿನಯಿಸಿದ್ದರು. ಇದೀಗ ನಿರ್ದೇಶಕ ಆರ್.ಚಂದ್ರು ಅವರು ಸುದೀಪ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಮೂವರು ದಿಗ್ಗಜರು ಒಂದಾಗಿ ಮಾಡುತ್ತಿರುವ ಚಿತ್ರಕ್ಕೆ ಇಡೀ ಭಾರತೀಯ ಸಿನಿಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದು, ಈ ವರ್ಷದ ಮೆಗಾ ಹಿಟ್ ಚಿತ್ರವೆಂದೇ ಹೇಳಲಾಗುತ್ತಿದೆ.
ಆರ್.ಸಿ.ಸ್ಟುಡಿಯೋಸ್ ಕರ್ನಾಟಕದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿದ್ದು, 5 ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ದೊರೆಯಲಿದೆ. ಆರ್.ಸಿ.ಸ್ಟುಡಿಯೋಸ್ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್ 2ರಂದು (ನಾಳೆ) ಅಧಿಕೃತ ಘೋಷಣೆಯಾಗಲಿದೆ.