ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಕಾಂಬಿನೇಷನ್ನಲ್ಲಿ ರೆಡಿಯಾಗಿರುವ ಸಿನಿಮಾ 'ಖುಷಿ'. ಇವರಿಬ್ಬರು ತೆರೆ ಹಂಚಿಕೊಂಡಿರುವ ಮೊದಲ ಸಿನಿಮಾ ಇದು. ಈ ಚಿತ್ರದ ಅಪ್‌ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ಹಂಚಿಕೊಂಡಿದೆ. ಹೌದು, ಸಿನಿಮಾ ಬಿಡುಗಡೆ ದಿನಾಂಕನ್ನು ಘೋಷಿಸಿದೆ ಖುಷಿ ತಂಡ.
'ನಿನ್ನು ಕೋರಿ' ಮತ್ತು 'ಮಜಿಲಿ' ಖ್ಯಾತಿಯ ನಿರ್ದೇಶಕ ಶಿವ ನಿರ್ವಾಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ನಿರ್ಮಿಸುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಲಿದೆ.
ಹೊಸ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಈ ಕೂಲ್ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ಆಫೀಸ್‌ಗೆ ಹೋಗುವಾಗ ಟೆರೆಸ್ ಮೇಲಿಂದ ಸಮಂತಾಗೆ ವಿದಾಯ ಹೇಳುತ್ತಿರುವಂತೆ ಕಾಣುತ್ತಿದೆ. ಇದು ಅಭಿಮಾನಿಗಳು ಮತ್ತು ನೆಟಿಜನ್‌ಗಳನ್ನು ಆಕರ್ಷಿಸುತ್ತಿದೆ. ಸಿನಿಮಾದ ಬಗ್ಗೆ ಕುತೂಹಲ ಹೆಚ್ಚುತ್ತಿದೆ.
'ಅರ್ಜುನ್ ರೆಡ್ಡಿ', 'ಗೀತ ಗೋವಿಂದಂ', 'ಡಿಯರ್ ಕಾಮ್ರೇಡ್' ಮೂಲಕ ವಿಜಯ್ ದೇವರಕೊಂಡ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಆದರೆ ಆ ನಂತರ ಅವರು ನಟಿಸಿದ 'ಲೈಗರ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದರೂ ಸಹ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಈ ಖುಷಿ ಮೂಲಕ ಗಮನ ಸೆಳೆಯುತ್ತಿದ್ದು, ಚಿತ್ರ ಮತ್ತೆ ಯಶಸ್ಸು ತಂದುಕೊಡುವ ವಿಶ್ವಾಸದಲ್ಲಿದ್ದಾರೆ.