ತಮಿಳು ಚಿತ್ರರಂಗದ ಸೂಪರ್ಸ್ಟಾರ್ ನಟ ಕಮಲ್ ಹಾಸನ್. ಲೋಕೇಶ್ ಕನಕರಾಜ್ ಜೊತೆಗಿನ 'ವಿಕ್ರಮ್' ಸಿನಿಮಾ ಹಿಟ್ ಆದ ನಂತರ ಇವರ ಜನಪ್ರಿಯತೆ ದುಪ್ಪಟ್ಟಾಗಿದೆ. ಈಗಾಗಲೇ ಸಾಕಷ್ಟು ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಂಡಿರುವ ಸ್ಟಾರ್, ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕೆ 'KH234' ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರಕ್ಕೆ ಅಧಿಕೃತವಾಗಿ ಇಂದು ಚಾಲನೆ ಸಿಕ್ಕಿದೆ. ಈ ಸಿನಿಮಾಗಾಗಿ 36 ವರ್ಷಗಳ ಬಳಿಕ ಕಮಲ್ ಹಾಸನ್ ಮತ್ತು ಮಣಿರತ್ನಂ ಒಂದಾಗುತ್ತಿದ್ದಾರೆ.
ಕಮಲ್ ಹಾಸನ್ ಏಕಕಾಲಕ್ಕೆ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ 'ಇಂಡಿಯನ್ 2' ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ, ಬಹು ತಾರಾಗಣವಿರುವ 'ಕಲ್ಕಿ 2898 ಎಡಿ' ಸಿನಿಮಾದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದಲ್ಲದೇ ಎಚ್.ವಿನೋದ್ ನಿರ್ದೇಶನ ಮಾಡುತ್ತಿರುವ 'KH233' ಚಿತ್ರಕ್ಕೂ ಇವರೇ ನಾಯಕ. ಕಮಲ್ ಹಾಸನ್ ಅವರ 234ನೇ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇತ್ತೀಚೆಗಿನ ಮಾಹಿತಿ ಪ್ರಕಾರ, ಮಣಿರತ್ನಂ ಅವರು ಕಮಲ್ ಹಾಸನ್, ವಿನೋದ್ ಅವರೊಂದಿಗಿನ ಸಿನಿಮಾದ ಕೆಲಸ ಮುಗಿಸಿದ ಬಳಿಕ ಶೂಟಿಂಗ್ ಪ್ರಾರಂಭಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ 'KH234' ಚಿತ್ರಕ್ಕೆ ಚೆನ್ನೈನಲ್ಲಿ ಇಂದು (ಅ.27) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಹೀಗಾಗಿ ಎರಡು ಚಿತ್ರಗಳಲ್ಲೂ ಏಕಕಾಲಕ್ಕೆ ಕಮಲ್ ಹಾಸನ್ ಕೆಲಸ ಮಾಡಲಿದ್ದಾರೆ ಎಂದು ಕಾಣಿಸುತ್ತಿದೆ. 'KH234'ಗೆ ಚಾಲನೆ ಸಿಗುವ ವೇಳೆ ಮ್ಯೂಸಿಕ್ ಕಂಪೋಸರ್ ಎ.ಆರ್ ರೆಹಮಾನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಹಾಗೂ ಛಾಯಾಗ್ರಾಹಕ ರವಿ ಚಂದ್ರನ್ ಉಪಸ್ಥಿತರಿದ್ದರು.