ಇಂದು (ಜ.8) ಕನ್ನಡ ನಾಡಿನ ಹಾಗು ದೇಶದ ಜನಪ್ರಿಯ ತಾರೆ ಯಶ್ ಜನ್ಮದಿನ. ಈ ಬಾರಿ ನಟ ತಮ್ಮ ಜನ್ಮದಿನವನ್ನು ಕುಟುಂಬ ಮತ್ತು ಆಪ್ತ ಸ್ನೇಹಿತರ ಜೊತೆ ದುಬೈನಲ್ಲಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್, ಮಕ್ಕಳು ಹಾಗೂ ಆಪ್ತ ಸ್ನೇಹಿತರು ಜನ್ಮದಿನ ಆಚರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಸೇರಿದಂತೆ ಸಿನಿಮಾ ರಂಗದವರು ಯಶ್ ಅವರಿಗೆ ಶುಭ ಹಾರೈಸುತ್ತಿದ್ದಾರೆ.
ಕೆಜಿಎಫ್ 2 ಹಿಟ್ ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಈ ಕುತೂಹಲವನ್ನು ಅವರು ಅಷ್ಟೇ ರಹಸ್ಯವಾಗಿಟ್ಟಿದ್ದು, ಜನ್ಮದಿನದ ಹಿನ್ನೆಲೆಯಲ್ಲಿ ಇಂದು ದೊಡ್ಡದಾಗಿ ಪ್ರಕಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅದು ಹುಸಿಯಾಗಿದೆ. ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಆದ್ರೆ ತಮ್ಮ ಮುಂದಿನ ದೊಡ್ಡ ಯೋಜನೆಯ ಬಗ್ಗೆ ಯಶ್ ಇತ್ತೀಚೆಗೆ ಸಣ್ಣ ಸುಳಿವು ಕೊಟ್ಟಿದ್ದಾರೆ. ಇದು ಮತ್ತಷ್ಟು ಕುತೂಹಲ ಕೆರಳಿಸಿದೆ.
ಪತ್ರದ ಮೂಲಕ ಅಭಿಮಾನಿಗಳಿಗೆ ಸುಳಿವು ಕೊಟ್ಟ ಯಶ್: ನಟ ಯಶ್ ಎರಡು ದಿನಗಳ ಹಿಂದೆ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಪತ್ರ ಬರೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಜನ್ಮದಿನದಂದು ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಭೇಟಿಯಾಗಲು ಅಂದು ಯಾರೂ ಬರಬೇಡಿ, ಶೀಘ್ರದಲ್ಲೇ ಹೆಮ್ಮೆ ಪಡುವಂತಹ ಸುದ್ದಿಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ವಿನಂತಿಸಿದ್ದರು.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ?
'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯಿಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಿ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೇ ಇತ್ತೀಚಿನ ವರ್ಷಗಳಲ್ಲಿ. ನೀವು ನನ್ನ ದಿನವನ್ನು ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನು ನೋಡಬೇಕು, ನಿಮ್ಮೊಂದಿಗೆ ಸಮಯ ಕಳೆಯಬೇಕು ಎಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರುವುದನ್ನೇನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ. ಕ್ಷಮಿಸಿ, ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ. ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ.' ಎಂದು ಪತ್ರದಲ್ಲಿ ಬರೆದಿದ್ದರು.
2020-21ರಲ್ಲಿ ಕೊರೊನಾ ಇದ್ದ ಕಾರಣ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಕಳೆದ ವರ್ಷವೂ ಜನ್ಮದಿನ ಆಚರಿಸಿಕೊಂಡಿಲ್ಲ. ಈ ವರ್ಷ ನೆಚ್ಚಿನ ನಟನ ಜನ್ಮದಿನ ಆಚರಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಅದ್ಧೂರಿ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದರು. ಆದ್ರೆ ಯಶ್ ಪತ್ರ ಬರೆದು, ಮನವಿ ಜೊತೆಗೆ ಒಂದು ಸರ್ಪ್ರೈಸ್ ಕಾಯ್ದಿರಿಸಿದ್ದರು. ಇದರಿಂದ ಫ್ಯಾನ್ಸ್ ಕೊಂಚ ನಿರಾಶರಾದ್ರೂ ಸಹ ಮುಂದಿನ ಯೋಜನೆ ಬಗ್ಗೆ ತಿಳಿದುಕೊಂಡು ಖುಷಿಪಟ್ಟಿದ್ದಾರೆ.
ಮುಂದಿನ ಸಿನಿಮಾ ಮೇಲೆ ನಿರೀಕ್ಷೆ: ಕೆಜಿಎಫ್ ಸಕ್ಸಸ್ಸಿನಿಂದ ಉತ್ತುಂಗದಲ್ಲಿರುವ ಯಶ್ ಮುಂದಿನ ಸಿನಿಮಾ ಯಾವುದೇ ಎಂಬುದೇ ಸದ್ಯದ ಕುತೂಹಲ. ಮೂಲಗಳ ಪ್ರಕಾರ, ಕೆವಿಎನ್ ಪ್ರೊಡಕ್ಷನ್ನಲ್ಲಿ ನರ್ತನ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಯಾವುದೂ ಕೂಡ ಈವರೆಗೆ ಅಧಿಕೃತಗೊಂಡಿಲ್ಲ.
ಇದನ್ನೂ ಓದಿ: ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲ್ಲ ಯಶ್: ಸರ್ಪ್ರೈಸ್ ಸುಳಿವು ಕೊಟ್ಟ ಕೆಜೆಎಫ್ ಸ್ಟಾರ್!