ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಸಿನೆಮಾ ಮೂಲಕ ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ 1,200 ಕೋಟಿ ರೂ.ಗೂ ಅಧಿಕ ಗಳಿಸಿ ಜನ ಮನ್ನಣೆ ಪಡೆದಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಹಾಗೂ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅಭಿನಯದ ಗಮ್ಮತ್ತು ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ, ಅದ್ಧೂರಿ ದೃಶ್ಯಾವಳಿ ಹೊಂದಿರುವ ಚಿತ್ರದ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ.
ಕೆಜಿಎಫ್ ಚಾಪ್ಟರ್ 2 ಯಶಸ್ವಿ 50 ದಿನ ಪ್ರದರ್ಶನಗೊಳ್ಳುತ್ತಿರುವ ಬೆನ್ನಲ್ಲೇ, ಈಗ ಕೆಜಿಎಫ್ ಚಾಪ್ಟರ್ 3 ಬಗ್ಗೆ ಸಿನಿಪ್ರಿಯರಲ್ಲಿ ಚರ್ಚೆ ಶುರುವಾಗಿದೆ. ಚಾಪ್ಟರ್ 2 ಕ್ಲೈಮಾಕ್ಸ್ನಲ್ಲಿ ಚಾಪ್ಟರ್ 3 ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸುಳಿವು ನೀಡಿದ್ದರು. ಅದರಂತೆ ಇದೀಗ ಈ ಸಿನಿಮಾದ ಕಲಾವಿದರ ಬಗ್ಗೆ ಗಾಂಧಿನಗರದಲ್ಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
ಚಾಪ್ಟರ್ 3ನಲ್ಲಿ ಹೃತಿಕ್ ರೋಷನ್?:ಕೆಲ ದಿನಗಳ ಹಿಂದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿ, ಚಾಪ್ಟರ್ 3 ಬರಲಿದೆ. ಆದರೆ, ಎಷ್ಟು ದಿನ ಆಗುತ್ತೆ ಅಂತಾ ಗೊತ್ತಿಲ್ಲ, ಅದಷ್ಟು ಬೇಗ ಈ ಬಗ್ಗೆ ಅಪ್ಡೇಟ್ ನೀಡುತ್ತೇ ಎಂದಿದ್ದರು.
ಅದರಂತೆ, ಕೆಜಿಎಫ್ ಚಾಪ್ಟರ್ 3ರಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿಯೊಂದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಸೌಂಡ್ ಮಾಡುತ್ತಿದೆ. ಇದರಲ್ಲೆಷ್ಟು ನಿಜವಿದೆ ಎಂದು ಗೊತ್ತಿಲ್ಲ. ಆದರೆ ಹೊಂಬಾಳೆ ಫಿಲಂಸ್ ಸಂಸ್ಥೆಯ ಕೆಲ ಆಪ್ತರು ಹೇಳುವ ಪ್ರಕಾರ, ಇದು ಸುಳ್ಳು ಸುದ್ದಿಯಾಗಿದೆ. ಇಂತಹ ಸುದ್ದಿ ಯಾಕೇ ಹಬ್ಬುಸುತ್ತಾರೆ ಅಂತಾ ಗೊತ್ತಿಲ್ಲ ಎನ್ನುತ್ತಾರೆ.