ಹೈದರಾಬಾದ್:ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿರುವ ಕೆಜಿಎಫ್ ಚಾಪ್ಟರ್ 2 ಎದುರು ಹಿಂದಿ ಚಿತ್ರರಂಗದ ಕೆಲವೊಂದು ಚಿತ್ರಗಳು ಮಕಾಡೆ ಮಲಗಿವೆ. ಇತ್ತೀಚೆಗೆ ತೆರೆ ಕಂಡಿರುವ ಅಜಯ್ ದೇವಗನ್ ನಟನೆಯ ರನ್ವೇ 34 ಹಾಗೂ ಟೈಗರ್ ಶ್ರಾಫ್ ಅಭಿನಯದ ಹೀರೋಪಂತಿ 2 ಬಾಕ್ಸ್ ಆಫೀಸ್ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿವೆ.
ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರ್ಪಡೆಯಾಗಿರುವ ಕೆಜಿಎಫ್ ಚಾಪ್ಟರ್ 2 ಹಿಂದಿ ಅವತರಣಿಕೆಯಲ್ಲೇ 369.58 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೀಗ ಏಪ್ರಿಲ್ 29ರಂದು ತೆರೆ ಕಂಡಿರುವ ಅಜಯ್ ದೇವಗನ್ ನಟನೆಯ ರನ್ವೇ ಕೇವಲ 3 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಮಾತು ಕೇಳಿ ಬಂದಿದೆ. ಇದರ ಜೊತೆಗೆ ಬಾಲಿವುಡ್ ನಟ ಟೈಗರ್ ಶ್ರಾಫ್ ನಟನೆಯ ಹೀರೋಪಂತಿ 2 ಮೊದಲ ದಿನ 6.50 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ತಮಿಳು ಭಾಷೆಯಲ್ಲೂ ದಾಖಲೆ ಬರೆದ ಕೆಜಿಎಫ್ 2: ರಾಕಿ ಭಾಯ್ ಅಭಿನಯದ ಕೆಜಿಎಫ್ ಚಾಫ್ಟರ್ 2 ತಮಿಳು ಬಾಕ್ಸ್ ಆಫೀಸ್ನಲ್ಲೂ ಹೊಸದೊಂದು ದಾಖಲೆ ಬರೆದಿದೆ. ತಮಿಳುನಾಡಿನಲ್ಲಿ 100 ಕೋಟಿ ರೂ. ಗಳಿಕೆ ಮಾಡಿರುವ ಈ ಚಿತ್ರ, ಇಷ್ಟೊಂದು ಹಣ ಗಳಿಕೆ ಮಾಡಿರುವ ಕರ್ನಾಟಕದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಜೊತೆಗೆ ಬೀಸ್ಟ್ನಂತಹ ಚಿತ್ರದ ಎದುರು ಸದ್ದು ಮಾಡಿದೆ.
ಇದನ್ನೂ ಓದಿ:ಕನ್ನಡಿಗರಿಂದ ಕನ್ನಡಿಗರಿಗಾಗಿ ಸಿದ್ದವಾಗಿರೋ ಟಾಕೀಸ್ಗೆ ಸಿಕ್ತು ಕರುನಾಡ ಚಕ್ರವರ್ತಿಯ ಅಭಯಹಸ್ತ!
ಭಾರತೀಯ ಚಿತ್ರರಂಗದಲ್ಲಿ ದಂಗಲ್, ಬಾಹುಬಲಿ 2 ಹಾಗೂ ಆರ್ಆರ್ಆರ್ ಮಾತ್ರ ಸಾವಿರ ಕೋಟಿ ಕ್ಲಬ್ ಸೇರಿದ್ದು, ಇದೀಗ ಆ ಸಾಲಿನಲ್ಲಿ ಕನ್ನಡದ ಚಿತ್ರವೊಂದು ಸೇರ್ಪಡೆಯಾಗಿದೆ. ವಿಶ್ವದಾದ್ಯಂತ ಏಪ್ರಿಲ್ 14ರಂದು ರಿಲೀಸ್ ಆಗಿರುವ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಚಿತ್ರದಲ್ಲಿ ನಟ ಯಶ್, ಬಾಲಿವುಡ್ನ ಸಂಜಯ್ ದತ್, ನಟಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.