ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ 'ಕೆಜಿಎಫ್'. ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ಚಿತ್ರ 2018ರ ಡಿಸೆಂಬರ್ 21ರಂದು ತೆರೆ ಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ನಿರೀಕ್ಷೆಗೂ ಮೀರಿ ಸದ್ದು ಮಾಡಿದ ಈ ಸಿನಿಮಾ ಇಂದಿಗೆ 5 ವರ್ಷ ಪೂರೈಸಿದೆ. ಇದೇ ಚಿತ್ರತಂಡದಿಂದ ತಯಾರಾಗಿರುವ 'ಸಲಾರ್' ಸಿನಿಮಾ ನಾಳೆ ತೆರೆ ಕಾಣುತ್ತಿರುವುದು ಮತ್ತೊಂದು ವಿಶೇಷ.
'KGF 1' ನೋಡಿದ್ದ ಪ್ರೇಕ್ಷಕರಿಗೆ 'KGF 2' ಮನರಂಜನೆಯ ರಸದೌತಣ ಉಣಬಡಿಸಿತ್ತು. ಯಶ್ ಸ್ಟೈಲ್, ಅತ್ಯದ್ಭುತ ಅಭಿನಯ, ಮೇಕಿಂಗ್ ಶೈಲಿ, ಕಥೆ ರವಾನಿಸಿದ ರೀತಿ ಎಲ್ಲವೂ ಅಭಿಮಾನಿಗಳ ಮನ ಮುಟ್ಟಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ತೆರೆಕಂಡ ಈ ಚಿತ್ರ ದೇಶದ ಮೂಲೆ ಮೂಲೆಯ ಪ್ರೇಕ್ಷಕರನ್ನು ತಲುಪಿತ್ತು. ಕೇವಲ ಸಿನಿಪ್ರಿಯರು ಮಾತ್ರವಲ್ಲದೇ ಸ್ಟಾರ್ ಸೆಲೆಬ್ರಿಟಿಗಳು ಸಹ ಯಶ್ ನಟನೆ ಬಗ್ಗೆ ಮಾತನಾಡುವಂತಾಯ್ತು. ಬರೋಬ್ಬರಿ 1,200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆಗಳನ್ನು ಪುಡಿಗಟ್ಟಿತು 'KGF 2'.
ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಕ್ರೇಜ್ ಹೆಚ್ಚಾಯಿತು. ಭಾರತೀಯ ಚಿತ್ರರಂಗದ ಸ್ಟಾರ್ ನಟನಾಗಿ ಹೊರಹೊಮ್ಮಿದರು. 'ಉಗ್ರಂ' ಮೂಲಕ ಕನ್ನಡ ಪ್ರೇಕ್ಷಕರಿಗೆ ಮಾತ್ರ ಪರಿಚಿತರಾಗಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದರು. ಚಿತ್ರತಂಡದ ಮೇಲೆ ನಂಬಿಕೆ ಇಟ್ಟು ಬಂಡವಾಳ ಹೂಡಿದ್ದ ನಿರ್ಮಾಪಕ ವಿಜಯ್ ಕಿರಗಂದೂರು ದೊಡ್ಡ ಮಟ್ಟದಲ್ಲೇ ಸಕ್ಸಸ್ ಪಡೆದುಕೊಂಡರು. ಇನ್ನೂ ಚೊಚ್ಚಲ ಸಿನಿಮಾದಲ್ಲೇ ಶ್ರೀನಿಧಿ ಶೆಟ್ಟಿ ಪ್ರೇಕ್ಷಕರ ಮನ ಗೆದ್ದಿದ್ದು ಸುಳ್ಳಲ್ಲ. ಈಗವರು ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ.
ನಾಳೆ 'ಸಲಾರ್' ರಿಲೀಸ್: ಇದೇ ಚಿತ್ರತಂಡದಿಂದ 'ಸಲಾರ್' ಸಿನಿಮಾ ತಯಾರಾಗಿದೆ. ಟಾಲಿವುಡ್ ನಟ ಪ್ರಭಾಸ್ ಮತ್ತು ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು 'ಕೆಜಿಎಫ್' ಚಿತ್ರತಂಡದಿಂದ ರೂಪುಗೊಂಡಿದೆ. ಸಿನಿಮಾದಲ್ಲಿನ ಪಾತ್ರವರ್ಗ ಮಾತ್ರ ಬದಲಾಗಿದ್ದು ಬಿಟ್ಟರೆ, ಕೆಜಿಎಫ್ನ ತೆರೆಯ ಹಿಂದೆ ಕೆಲಸ ಮಾಡಿದ ಅದೇ ತಂಡ ಈ ಸಿನಿಮಾಗೂ ಕೆಲಸ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. 'ಸಲಾರ್' ನಾಳೆ ತೆರೆ ಕಾಣಲಿದ್ದು, ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಮತ್ತೊಂದು ವಿಚಾರವೆಂದರೆ, 2018ರ ಡಿಸೆಂಬರ್ 21ರಂದು 'ಕೆಜಿಎಫ್ 1' ಜೊತೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರ 'ಜೀರೋ' (Zero) ಸಿನಿಮಾ ತೆರೆ ಕಂಡಿತ್ತು. ಕಿಂಗ್ ಖಾನ್ಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದರೂ ಸಹ 'ಕೆಜಿಎಫ್'ನ ಅಬ್ಬರಕ್ಕೆ 'ಜೀರೋ' ಬಾಕ್ಸ್ ಆಫೀಸ್ನಲ್ಲಿ ನಲುಗಿತ್ತು. ಇದಾಗಿ ಶಾರುಖ್ ಖಾನ್ ನಾಲ್ಕು ವರ್ಷ ಸಿನಿಮಾನೇ ಮಾಡಿರಲಿಲ್ಲ. ಈ ವರ್ಷ ಪ್ರಾರಂಭದಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡ ಅವರು 'ಜವಾನ್' ಮತ್ತು 'ಪಠಾಣ್' ಎಂಬ ಎರಡು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಎರಡು ಚಿತ್ರಗಳು ₹1000 ಕೋಟಿ ಕ್ಲಬ್ ಸೇರಿದೆ.
ಶಾರುಖ್ ನಟನೆಯ ಮತ್ತೊಂದು ಸಿನಿಮಾ 'ಡಂಕಿ' ಇಂದು ತೆರೆ ಕಂಡಿದೆ. ನಟ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಬಾರಿಯೂ 'ಕೆಜಿಎಫ್' ತಂಡದಿಂದಲೇ ತಯಾರಾಗಿರುವ 'ಸಲಾರ್' ಸಿನಿಮಾ 'ಡಂಕಿ'ಗೆ ಪೈಪೋಟಿ ನೀಡಲಿದೆ. 'ಸಲಾರ್' ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ನಲ್ಲೂ ಕಿಂಗ್ ಖಾನ್ ಸಿನಿಮಾವನ್ನು ಮೀರಿಸಿದೆ. ಹೀಗಾಗಿ ನಾಳೆ ಬಾಕ್ಸ್ ಆಫೀಸ್ನಲ್ಲಿ ಪ್ರಭಾಸ್ ಸಿನಿಮಾ ಧೂಳೆಬ್ಬಿಸಲಿದೆ. ಮತ್ತೊಮ್ಮೆ ಶಾರುಖ್ ಖಾನ್ ಸಿನಿಮಾಗೆ 'ಕೆಜಿಎಫ್' ಚಿತ್ರತಂಡ ಅಡ್ಡಿಯಾಗಲಿದೆಯಾ? ಎಂದು ತಿಳಿಯಲು ನಾಳೆಯವರೆಗೆ ಕಾಯಲೇಬೇಕು.
ಇದನ್ನೂ ಓದಿ:'ಸಲಾರ್' ಸಿನಿಮಾ 'ಕೆಜಿಎಫ್'ಗೆ ಹೋಲಿಸಿದ ಫ್ಯಾನ್ಸ್: ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?