'2024' ಕನ್ನಡ ಚಿತ್ರರಂಗಕ್ಕೆ ಅದೃಷ್ಟದ ವರ್ಷವಾಗೋ ಲಕ್ಷಣಗಳಿವೆ. ಸ್ಟಾರ್ ನಟರ ಸಿನಿಮಾಗಳ ಜೊತೆಗೆ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಪ್ರಿಯರನ್ನು ಆಕರ್ಷಿಸುತ್ತಿವೆ. ವಿನೂತನ ಸಿನಿಮಾವೊಂದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. 'ಕೆರೆಬೇಟೆ' ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದಿರುವ 'ಕೆರೆಬೇಟೆ' ಚಿತ್ರದ ಟೀಸರ್ ಅನ್ನು ಬಹಳ ವಿನೂತನವಾಗಿ ಅನಾವರಣಗೊಳಿಸಲಾಗಿದೆ.
ಬೆಂಗಳೂರಿನ ಮಲ್ಲತಹಳ್ಳಿ ಕೆರೆದಂಡೆಯಲ್ಲಿ ನಡೆದ ಟೀಸರ್ ರಿಲೀಸ್ ಈವೆಂಟ್ ಅನೇಕ ಗಮನ ಸೆಳೆದಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಡಾಲಿ ಧನಂಜಯ್ ಮತ್ತು ದಿನಕರ್ ತೂಗುದೀಪ್ ಆಗಮಿಸಿ, ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕರಾದ ಪವನ್ ಒಡೆಯರ್, ಗುರು ದೇಶಪಾಂಡೆ, ಜಡೇಶ್ ಸೇರಿದಂತೆ ಅನೇಕರು ಈವೆಂಟ್ನಲ್ಲಿ ಭಾಗಿಯಾಗಿ ಶುಭಹಾರೈಸಿದರು.
'ಕೆರೆಬೇಟೆ' ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ. ರಾಜ್‌ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಗೌರಿ ಶಂಕರ್ ಇದೀಗ 'ಕೆರೆಬೇಟೆ' ಮೂಲಕ ಪ್ರೇಕ್ಷಕರೆದುರು ಬರುತ್ತಿದ್ದಾರೆ. ರಾಜ್‌ಗುರು ಅವರಿಗಿದು ಚೊಚ್ಚಲ ಚಿತ್ರ. ಹಾಗಂತ ಸಿನಿಮಾ ರಂಗ ಅವರಿಗೆ ಹೊಸದೇನಲ್ಲ. ನಿರ್ದೇಶಕ ಪವನ್ ಒಡೆಯರ್ ಜೊತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ಟೀಸರ್ ರಿಲೀಸ್ ಮಾಡಿ ಮಾತನಾಡಿದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್, 'ನಮ್ಮ ನೆಲದ ಸಿನಿಮಾಗಳು ಎಂದೂ ಸೋಲಲ್ಲ. ಕೆರೆಬೇಟೆ ಕೂಡ ನಮ್ಮ ನೆಲದ ಚಿತ್ರ. ಎಷ್ಟೋ ಜನರಿಗೆ 'ಕೆರೆಬೇಟೆ' ಬಗ್ಗೆ ಗೊತ್ತಿಲ್ಲ. ಈ ಸಿನಿಮಾ ಮೂಲಕ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಸಂಸ್ಕೃತಿಯ ಸಿನಿಮಾವಿದು' ಎಂದು ತಿಳಿಸಿದರು. ದಿನಕರ್ ತೂಗುದೀಪ್ ಮಾತನಾಡಿ, 'ನಾಯಕ ಗೌರಿಶಂಕರ್ ನನಗೆ ಬಹಳ ಸಮಯದಿಂದ ಪರಿಚಿತರು. ಈ ಸಿನಿಮಾವನ್ನು ಈಗಾಗಲೇ ನಾನು ನೋಡಿದ್ದೇನೆ. ಬಹಳ ಚೆನ್ನಾಗಿದೆ. ಈ ಚಿತ್ರ ಗೆದ್ದೇ ಗೆಲ್ಲುತ್ತದೆ' ಎಂದು ತಿಳಿಸಿದರು.