ಕನ್ನಡ ಚಿತ್ರರಂಗದಲ್ಲಿ ರಾಜಹಂಸ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ ನಟ ಗೌರಿ ಶಂಕರ್. ಈ ಚಿತ್ರ ಆದ್ಮಲೇ ಗೌರಿ ಶಂಕರ್ ಬಹಳ ದಿನಗಳ ಬಳಿಕ ಒಳ್ಳೆ ಕಂಟೆಂಟ್ ಇರುವ ಕೆರೆಬೇಟೆ ಎಂಬ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ. ಕೆರೆಬೇಟೆ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿತ್ತು. ಈಗ ಚಿತ್ರದ ಮೋಷನ್ ಪೋಸ್ಟರನ್ನು ಬಿಡುಗಡೆ ಮಾಡಲಾಗಿದೆ.
ಈ ಮೋಷನ್ ಪೋಸ್ಟರ್ನಲ್ಲಿ ನಟ ಗೌರಿಶಂಕರ್, ಕೈಯಲ್ಲಿ ಖಡ್ಗ, ಕುತ್ತಿಗೆಯಲ್ಲಿ ವರಹದ ಪೆಂಡೆಂಟ್, ಹಿರಿ ಕಿರಿಯರ ಮಧ್ಯೆ, ನಾಯಕ ಬುಟ್ಟಿಯಂತಹ ಬಲೆ ಹಿಡಿದು ಕೆರೆಗೆ ಹಾರಿ ಬೇಟೆಗೆ ಸಿದ್ಧರಾಗಿರುವುದನ್ನು ಕಾಣಬಹುದು. ಈ ಮೋಷನ್ ಪೋಸ್ಟರ್ಗೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಲೆನಾಡಿನ ವಿಶೇಷ ಸಂಪ್ರದಾಯ ಕೆರೆಬೇಟೆ :ಮಲೆನಾಡ ಭಾಗದ ಒಂದು ವಿಶಿಷ್ಟ ಸಂಪ್ರದಾಯ ಕೆರೆಬೇಟೆ. ವರ್ಷಕ್ಕೊಮ್ಮೆ ದೊಡ್ಡ ಕೆರೆಗಳಲ್ಲಿ ಮೀನು ಬೇಟೆಯಾಡುವ ಈ ವಿಶಿಷ್ಟ ಪದ್ಧತಿಯನ್ನು ಮೂಲವಾಗಿಟ್ಟುಕೊಂಡು ಗೌರಿಶಂಕರ್, ‘ಕೆರೆಬೇಟೆ’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಾಯಕನಾಗಿಯೂ ಅಭಿನಯಿಸಿದ್ದಾರೆ.
‘ಕೆರೆಬೇಟೆ’ ಚಿತ್ರವನ್ನು ಬರೆದು ನಿರ್ದೇಶಿಸಿರುವುದು ರಾಜ್‍ಗುರು. ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಎ.ಆರ್ ಬಾಬು, ಪವನ್ ಒಡೆಯರ್ ಹಾಗೂ ಇತರ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ರಾಜ್ ಗುರು ಅವರಿಗಿದೆ. ಇದೀಗ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ಕಥೆಯನ್ನೂ ಬರೆದಿದ್ದಾರೆ. ಈ ಚಿತ್ರವನ್ನು ಗೌರಿಶಂಕರ್ ಅವರು ಜೈ ಶಂಕರ್ ಪಟೇಲ್ ಜೊತೆಗೆ ಸೇರಿ ಜನಮನ ಸಿನಿಮಾ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಇದ್ದು, ಕೀರ್ತನ್ ಪೂಜಾರ್ ಛಾಯಾಗ್ರಹಣ ಚಿತ್ರಕ್ಕಿದೆ.
ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸೊರಬ, ಸಿಗಂದೂರು ಮುಂತಾದ ಕಡೆ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕೆರೆಬೇಟೆ ಸಿನಿಮಾ ತಂಡ ಕೆಲವೇ ದಿನಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಬಳಿಕ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದೆ. ರಾಜಹಂಸ ಚಿತ್ರದಲ್ಲಿ ಲವರ್ ಬಾಯ್ ಇಮೇಜಿನಿಂದ ಕನ್ನಡಿಗರ ಮನಗೆದ್ದಿದ್ದ ಗೌರಿ ಶಂಕರ್ ಈ ಬಾರಿ ಮಾಸ್ ಲುಕ್ ನಲ್ಲಿ ದರ್ಶನ ಕೊಡ್ತಾ ಇರೋದು ಸಹಜವಾಗಿ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ.
ಇದನ್ನೂ ಓದಿ :'ಟಗರು ಪಲ್ಯ'ಗೆ ಫುಲ್ ಡಿಮ್ಯಾಂಡ್; ಸಿನಿಮಾ ರಿಮೇಕ್ಗೂ ಹೆಚ್ಚಾಯ್ತು ಬೇಡಿಕೆ