ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಮತ್ತು ಸೋನಲ್ ಮೊಂಥೆರೋ ಅಭಿನಯದ ಬನಾರಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು ಚಿತ್ರದ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಇದೀಗ ಚಿತ್ರ ತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಹೊರಬಿದ್ದಿದೆ. ಕೇರಳದಲ್ಲಿ ಪ್ರಖ್ಯಾತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್ ಬನಾರಸ್‌ನ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈಗಾಗಲೇ ಕೇರಳದಲ್ಲಿ ದೊಡ್ಡ ಹೆಸರು ಮಾಡಿರುವ ಸದರಿ ಸಂಸ್ಥೆ ಹಲವಾರು ಹಿಟ್ ಸಿನಿಮಾಗಳನ್ನು ಕೇರಳದಲ್ಲಿ ಬಿಡುಗಡೆಗೊಳಿಸಿದೆ. ಈ ಹಿನ್ನೆಲೆ ಬನಾರಸ್ ಸಿನಿಮಾ ಯಶಸ್ಸಿಗೆ ಬಲ ಸಿಕ್ಕಂತಾಗಿದೆ.
ಈ ವಿಚಾರವನ್ನು ಖುದ್ದು ಮಲಕುಪ್ಪಡಮ್ ಸಂಸ್ಥೆಯೇ ಅಧಿಕೃತವಾಗಿ ಘೋಷಿಸಿಕೊಂಡಿದೆ. ದೇಶಾದ್ಯಂತ ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪಡಮ್ ಎಂದೇ ಹೆಸರುವಾಸಿ ಆಗಿರುವವರು. ಅವರು ಉದ್ಯಮಿಯಾಗಿದ್ದುಕೊಂಡೇ ಮಲಕುಪ್ಪಡಮ್ ಫಿಲಂಸ್ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅದರೊಂದಿಗೆ ಮಲಕುಪ್ಪಡಮ್ ರಿಲೀಸ್ ಸಂಸ್ಥೆಯ ಮೂಲಕ ಹಲವಾರು ಸಿನಿಮಾಗಳ ವಿತರಕರಾಗಿಯೂ ಯಶಸ್ವಿಯಾಗಿದ್ದಾರೆ.
ಎಲ್ಲ ರೀತಿಯಲ್ಲಿಯೂ ಗುಣಮಟ್ಟ ಹೊಂದಿರುವ ಚಿತ್ರಗಳ ವಿತರಣಾ ಹಕ್ಕುಗಳನ್ನು ಖರೀದಿಸುತ್ತಾ ಬಂದಿದೆ ಈ ಸಂಸ್ಥೆ. ಆದ್ದರಿಂದಲೇ ಈ ಸಂಸ್ಥೆ ಒಂದು ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದರೆ ಆ ಚಿತ್ರದ ಬಗ್ಗೆ ಸಹಜವಾಗಿ ನಿರೀಕ್ಷೆ ಮೂಡಿಕೊಳ್ಳುತ್ತದೆ. ಇವತ್ತಿಗೂ ಆಯ್ಕೆಯಲ್ಲಿ ಗುಣಮಟ್ಟ ಕಾಯ್ದುಕೊಂಡಿರುವ ಈ ಸಂಸ್ಥೆ, ಅದೇ ಮಾನದಂಡಗಳ ಆಧಾರದಲ್ಲಿಯೇ ಬನಾರಸ್ ಸಿನಿಮಾ ಅನ್ನು ಆರಿಸಿಕೊಂಡಿದೆ.