2022ನೇ ಸಾಲಿನ ಸೂಪರ್ ಹಿಟ್ ಚಿತ್ರ 'ಕಾಂತಾರ'ದ 'ವರಾಹ ರೂಪಂ' ಹಾಡನ್ನು ಒಟಿಟಿ ಅಥವಾ ಥಿಯೇಟರ್‌ಗಳಲ್ಲಿ ಬ್ಯಾನ್ ಮಾಡಿದ್ದ ಜಿಲ್ಲಾ ಕೋರ್ಟ್ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಕೊಝಿಕ್ಕೋಡ್ ಹೆಚ್ಚುವರಿ ಸೆಷನ್ಸ್ ಕೋರ್ಟ್, ವರಾಹ ರೂಪಂ ಹಾಡಿನ ಪ್ರಸಾರದ ನಿಷೇಧ ಆದೇಶಕ್ಕೆ ತಡೆ ನೀಡಿ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಈ ಆದೇಶ ಹೊರಡಿಸಿದ್ದಾರೆ. 'ಕಾಂತಾರ' ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಲ್ಲಿಸಿದ್ದ ಮೇಲ್ಮನವಿಯ ನಂತರ ಕೇರಳ ಹೈಕೋರ್ಟ್ ಈ ಆದೇಶ ನೀಡಿದೆ.
ಮಾತೃಭೂಮಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಮೇರೆಗೆ ಕ್ಯಾಲಿಕಟ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 'ವರಾಹ ರೂಪಂ' ಅನ್ನು ನಿಷೇಧಿಸಿತ್ತು. ತೈಕುಡಂ ಬ್ರಿಡ್ಜ್ ರಚಿಸಿದ 'ನವರಸಂ' ಗೀತೆಯೊಂದಿಗೆ 'ವರಾಹ ರೂಪಂ' ಹೋಲಿಕೆ ಕಂಡು ಬಂದ ಕಾರಣ ಕೆಳ ನ್ಯಾಯಾಲಯ ನಿಷೇಧ ವಿಧಿಸಿತ್ತು. ಅಮೆಜಾನ್, ಯೂಟ್ಯೂಬ್, ಸ್ಪಾಟಿಫೈ, ವಿಂಕ್ ಮ್ಯೂಸಿಕ್, ಡೆವೊ ಮ್ಯೂಸಿಕ್, ಜಿಯೋಸಾವನ್ ಸೇರಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಡಿನ ಪ್ರದರ್ಶನವನ್ನು ನ್ಯಾಯಾಲಯ ನಿಷೇಧಿಸಿತ್ತು.
ಇದಕ್ಕೂ ಮುನ್ನ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಜಾಮೀನು ಪ್ರಕ್ರಿಯೆಯಡಿ ಹಾಡಿನ ಪ್ರದರ್ಶನವನ್ನು ನಿಷೇಧಿಸಲಾಗಿತ್ತು. ಈ ತಿಂಗಳ ಆರಂಭದಲ್ಲಿ, ಕೊಝಿಕ್ಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ಕೇಸ್ ಪರಿಶೀಲಿಸಿದ ನಂತರ, ಹಾಡಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಕೃತಿಸ್ವಾಮ್ಯ ಕಾಯ್ದೆ 1957 (ಹಕ್ಕುಸ್ವಾಮ್ಯ ಉಲ್ಲಂಘನೆ) ಸೆಕ್ಷನ್ 64ರ ಅಡಿಯಲ್ಲಿ ದಾಖಲೆ ವಶಪಡಿಸಿಕೊಳ್ಳಲು ಸೂಚಿಸಲಾಗಿತ್ತು.
ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್ ಸೂರಜ್ ಏಪ್ರಿಲ್ 5ರಂದು ತನಿಖಾಧಿಕಾರಿಗೆ ಹಾಡಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲು ಮತ್ತು ಸಂಗೀತ ನಿರ್ದೇಶಕರು ಹಕ್ಕುಸ್ವಾಮ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪುರಾವೆಗಳನ್ನು ಸಂಗ್ರಹಿಸಲು ಸೂಚಿಸಿದರು.