ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಕ್ವೀನ್ ಅಂತಾ ಕರೆಸಿಕೊಂಡಿರುವ ಏಕೈಕ ನಟಿ ಎಂದರೆ ಅದು ಮಾಲಾಶ್ರೀ. ಗ್ಲ್ಯಾಮರ್ ಜೊತೆಗೆ ಪೊಲೀಸ್ ಪಾತ್ರಗಳಲ್ಲಿ ಕನ್ನಡಿಗರ ಮನಗೆದ್ದಿರುವ ನಟಿ ಮಾಲಾಶ್ರೀ ಅವರು ಬಹಳ ದಿನಗಳ ಬಳಿಕ ಮತ್ತೆ ಖಾಕಿ ತೊಟ್ಟಿದ್ದಾರೆ. ಯುವ ನಿರ್ದೇಶಕ ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೆಂಡದ ಸೆರಗು ಚಿತ್ರದಲ್ಲಿ ಆ್ಯಕ್ಷನ್ ಕ್ವೀನ್ ಖಾಕಿ ತೊಟ್ಟು ಅಬ್ಬರಿಸಲಿದ್ದಾರೆ. ಇತ್ತೀಚೆಗೆ ಈ ಕೆಂಡದ ಸೆರಗು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.
ಕೆಂಡದ ಸೆರಗು ಟೀಸರ್:ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಬರೆದ 'ಕೆಂಡದ ಸೆರಗು' ಕಾದಂಬರಿ ಆಧಾರಿತ ಸಿನಿಮಾ. ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡಿದೆ.
ಕುಸ್ತಿ, ಹೆಣ್ಣುಮಗಳೊಬ್ಬರ ನೋವಿನ ಕಥೆ:ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಮಾಲಾಶ್ರೀ, ಒಂದೊಳ್ಳೆ ಸಬ್ಜೆಕ್ಟ್ ಚಿತ್ರದಲ್ಲಿದೆ. ಸಿನಿಮಾ ಕೆಲಸ ಆದ ಮೇಲೆ ಒಮ್ಮೆ ನನಗೆ ತೋರಿಸಿ ಎಂದು ಹೇಳಿದ್ದೆ. ರಫ್ ಸ್ಕೆಚ್ ನೋಡಿದ್ದೀನಿ, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನು ಪೊಲೀಸ್ ಪಾತ್ರಗಳನ್ನು ಮಾಡಿದ್ದೇನೆ. ಆದರೆ ಈವರೆಗೆ ಮಾಡಿರುವ ಪಾತ್ರಕ್ಕಿಂತ ಡಿಫ್ರೆಂಟ್ ಫೀಲ್ ಈ ಪಾತ್ರ ನೀಡಿದೆ. ಈ ಚಿತ್ರ ಕೇವಲ ಕುಸ್ತಿ ಬಗ್ಗೆ ಅಲ್ಲ, ಹೆಣ್ಣುಮಗಳೊಬ್ಬಳ ನೋವಿನ ಕಥೆಯೂ ಚಿತ್ರದಲ್ಲಿದೆ. ಒಂದೊಳ್ಳೆ ಸಂದೇಶ ನಮ್ಮ ಈ ಚಿತ್ರದಲ್ಲಿದೆ. ಈ ಸಿನಿಮಾದ ಭಾಗವಾಗಿದ್ದಕ್ಕೆ ಬಹಳ ಖುಷಿ ಇದೆ. ನಾನೇ ಈ ಚಿತ್ರಕ್ಕೆ ಡಬ್ ಮಾಡುತ್ತಿದ್ದೇನೆ ಎಂದು ಮಾಲಾಶ್ರೀ ತಿಳಿಸಿದರು.
ಕುಸ್ತಿಗೆ ಹೆಚ್ಚು ಫೋಕಸ್: ನಿರ್ದೇಶಕ ರಾಕಿ ಸೋಮ್ಲಿ ಮಾತನಾಡಿ, ಕೆಂಡದ ಸೆರಗು ಕಾದಂಬರಿ ಆಧಾರಿತ ಸಿನಿಮಾ. ನಾನೇ ಈ ಕಥೆ ಬರೆದಿದ್ದೇನೆ. ನಿರ್ಮಾಪಕ ಕೊಟ್ರೇಶ್ ಹಾಗು ನಾನು ಸ್ನೇಹಿತರು. ಅವರಿಗೆ ನಾನು ಈ ಕಾದಂಬರಿ ಬಗ್ಗೆ ಹೇಳಿದಾಗ ಸಿನಿಮಾ ಮಾಡೋಣ ಎಂದು ಹೇಳಿದ್ರು. ಇನ್ನು ಭೂಮಿ ಶೆಟ್ಟಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಿನಿಮಾ ಮಾಡುವಾಗ ಮಾಲಾಶ್ರೀ ಮೇಡಂ ಜೊತೆ ಒಂದು ಪಾತ್ರ ಮಾಡಿಸಬೇಕು ಎಂದು ಒಂದು ಆಲೋಚನೆ ಬಂತು. ಕಥೆ ಕೇಳಿದ ಮೇಲೆ ಒಪ್ಪಿಕೊಂಡರು. ಸಿನಿಮಾ ಚಿತ್ರೀಕರಣದಲ್ಲೂ ಸಪೋರ್ಟ್ ಮಾಡಿದ್ರು. ಕಮರ್ಶಿಯಲ್ ಆಗಿ ಮೂಡಿ ಬಂದಿದೆ. ಕುಸ್ತಿಗೆ ಹೆಚ್ಚು ಫೋಕಸ್ ನೀಡಲಾಗಿದೆ. ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಆರು ಹಾಡುಗಳಿವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.