ಕನ್ನಡ ಚಿತ್ರರಂಗದಲ್ಲಿ 'ಆ್ಯಕ್ಷನ್ ಕ್ವೀನ್' ಎಂದೇ ಫೇಮಸ್ ಆಗಿರುವ ನಟಿ ಮಾಲಾಶ್ರೀ. ಗ್ಲ್ಯಾಮರ್ ಜೊತೆಗೆ ಪೊಲೀಸ್ ಪಾತ್ರಗಳಲ್ಲಿ ಕನ್ನಡಿಗರ ಮನಗೆದ್ದಿರುವ ಕನಸಿನ ರಾಣಿ ಬಹಳ ದಿನಗಳ ಬಳಿಕ ಮತ್ತೆ ಖಾಕಿ ತೊಟ್ಟಿದ್ದಾರೆ. ಯುವ ನಿರ್ದೇಶಕ ರಾಕಿ ಸೋಮ್ಲಿ ಆ್ಯಕ್ಷನ್ ಕಟ್ ಹೇಳುತ್ತಿರುವ 'ಕೆಂಡದ ಸೆರಗು' ಚಿತ್ರದಲ್ಲಿ ಮಾಲಾಶ್ರೀ ಖಾಕಿ ತೊಟ್ಟು ಅಬ್ಬರಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಈ ಮಧ್ಯೆ 'ಕೆಂಡದ ಸೆರಗು' ಸಿನಿಮಾದ ಎರಡನೇ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾ ಪಿಆರ್ಓ ಹಾಗೂ ಯುವ ನಟ ಹರೀಶ್ ಅರಸು ಮತ್ತು ಪೂರ್ಣಿಮಾ ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ನಿರ್ದೇಶನದ ಜೊತೆಗೆ ರಾಕಿ ಸೋಮ್ಲಿ 'ಈ ಹುಡುಗಿ ಎಷ್ಟು ಚೆಂದ' ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಅನಿರುದ್ಧ್ ಶಾಸ್ತ್ರಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿಗೆ ವೀರೇಶ್ ಕಂಬ್ಲಿ ಟ್ಯೂನ್ ಹಾಕಿದ್ದಾರೆ.
ಕೆಂಡದ ಸೆರಗು ಟೀಸರ್: ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಬರೆದ 'ಕೆಂಡದ ಸೆರಗು' ಕಾದಂಬರಿ ಆಧಾರಿತ ಸಿನಿಮಾವಿದು. ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಯಾಗಿದೆ.
ಇದನ್ನೂ ಓದಿ:Kausalya Supraja Rama: 'ಕೌಸಲ್ಯ ಸುಪ್ರಜಾ ರಾಮ' ಚಿತ್ರದ ಟ್ರೇಲರ್ನಲ್ಲಿ ನಂಬಿಕೆ, ಸಂಬಂಧಗಳ ಸಂಘರ್ಷವಿದೆ- ಕಿಚ್ಚ ಸುದೀಪ್
ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಮಾಲಾಶ್ರೀ ಹಾಗು ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ‘ಕೆಂಡದ ಸೆರಗು ಚಿತ್ರ ಸದ್ಯದಲ್ಲೇ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.
'ಮಾರಕಾಸ್ತ್ರ'ಕ್ಕಾಗಿ ಖಾಕಿ ತೊಟ್ಟ ಮಾಲಾಶ್ರೀ:ಮಾಲಾಶ್ರೀ ಅವರು ಕೆಂಡದ ಸೆರಗು ಜೊತೆಗೆ ಮಾರಕಾಸ್ತ್ರ ಸಿನಿಮಾದಲ್ಲೂ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಹೋಲುವ ಆನಂದ್ ಕೂಡ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಭರತ್ ಸಿಂಗ್, ಉಗ್ರಂ ಮಂಜು ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಗುರುಮೂರ್ತಿ ಸುನಾಮಿ ನಿರ್ದೇಶಕರಾಗಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನು ನಟರಾಜ್ ಹೊತ್ತಿದ್ದಾರೆ. ಜೊತೆಗೆ ನಿರ್ಮಾಪಕಿ ಕೋಮಲ ನಟರಾಜ್, ಕ್ರಿಯೇಟಿವ್ ಹೆಡ್ ಆಗಿ ಧನಕುಮಾರ್, ಕಾರ್ಯಕಾರಿ ನಿರ್ಮಾಪಕರಾಗಿ ಮಂಜುನಾಥ್ ಕೆಲಸ ಮಾಡಿದ್ದು, ಮಂಜುಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಸತೀಶ್ ಬಾಬು ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಅರುಣ್ ಸುರೇಶ್ ಛಾಯಾಗ್ರಹಣವಿದ್ದು, ಸದ್ಯದಲ್ಲೇ ಮಾರಕಾಸ್ತ್ರ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕಮಲ್ ಹಾಸನ್ ನನ್ನನ್ನು 'ಕನ್ನ' ಎಂದು ಗುರುತಿಸಿದಾಗ ತುಂಬಾ ವಿಶೇಷ ಎನಿಸಿತು: ನಟಿ ಮಾಲಾಶ್ರೀ ಟ್ವೀಟ್