ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಇದೀಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಮಹಾನಟಿ, ಮಿಸ್ ಇಂಡಿಯಾ, ರಂಗ್ ದೇ, ದಸರಾ ಸಿನಿಮಾದಲ್ಲಿ ಅದ್ಬುತವಾಗಿ ನಟಿಸಿದ್ದ ಈ ನಟಿ ತನ್ನ ಅಮೋಜ್ಞ ನಟನೆಯಿಂದಲೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಮಿಳು, ತೆಲುಗು ಚಿತ್ರದಲ್ಲಿ ಚಾಪು ಮೂಡಿಸಿದ್ದ ಈ ಬೆಡಗಿ ಬಾಲಿವುಡ್ನ ಸರಿಯಾದ ಅವಕಾಶಕ್ಕಾಗಿ ನೋಡುತ್ತಿದ್ದರು. ಇದೀಗ ಈ ಕಾಲ ಕೂಡಿ ಬಂದಿದೆ. ಇದೀಗ ಅಂತಿಮವಾಗಿ ಬಾಲಿವುಡ್ ಪ್ರವೇಶ ಮಾಡಲು ಸಜ್ಜಾಗಿದ್ದು, ವರುಣ್ ಧವನ್ ಜೊತೆಗೆ ಮೊದಲ ಬಾರಿ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.
ಹೆಸರಿಡದ ಈ ಪ್ರಾಜೆಕ್ಟ್ ಅನ್ನು ತಮಿಳು ಚಿತ್ರ ನಿರ್ದೇಶಕ ಕಲೇಸ್ ನಿರ್ದೇಶಿಸಲಿದ್ದಾರೆ. ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ಚಿತ್ರದಲ್ಲಿ ಕೀರ್ತಿ ಸುರೇಶ್ ಪ್ರಧಾನ ಮತ್ತು ಗ್ಲಾಮರಸ್ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಈ ಚಿತ್ರ ಕೀರ್ತಿಯ ಬಾಲಿವುಡ್ ಪ್ರವೇಶಕ್ಕೆ ಸರಿಯಾದ ವೇದಿಯಕೆಯಾಗಲಿದ್ದು, ತಮ್ಮ ನಟನೆ ಪ್ರದರ್ಶನಕ್ಕೂ ಇಲ್ಲಿ ಅವಕಾಶ ಇದೆ ಎಂದು ವರದಿಗಳು ತಿಳಿಸಿವೆ. ಈ ಚಿತ್ರವೂ ಭಾವನಾತ್ಮಕ, ಡ್ರಾಮ ಮತ್ತು ಆ್ಯಕ್ಷನ್ ಮತ್ತು ಸಿಕ್ವೇನ್ಸ್ಗಳಿಂದ ಕೂಡಿರಲಿದ್ದು, ಜನರನ್ನು ಹಿಡಿದಿಡಲು ಬೇಕಾದ ಎಲ್ಲಾ ಅಂಶಗಳು ಇದರಲ್ಲಿದೆ.
ಸದ್ಯ ಚಿತ್ರದಲ್ಲಿ ಕೀರ್ತಿ ಪಾತ್ರ ನಿರ್ವಹಣೆ ಅಂತಿಮವಾಗಿದ್ದು, ಎರಡನೇ ಮಹಿಳಾ ಪ್ರಧಾನ ನಟಿ ಪಾತ್ರಕ್ಕೆ ಆಯ್ಕೆ ಯಾರಾಗಲಿದ್ದಾರೆ ಎಂಬುದು ಖಚಿತವಾಗಿಲ್ಲ. ಮೂರು ತಿಂಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಯಲಿದ್ದು, ಮುಂಬೈನಿಂದ ಆರಂಭವಾಗಲಿದೆ. ಈ ಚಿತ್ರ ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ಅಂದರೆ 2024 ಮೇ 31ಕ್ಕೆ ತೆರೆಗೆ ಬರಲಿದೆ.