ಬೆಂಗಳೂರು:ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ನಾಲ್ಕನೇ ಆವೃತ್ತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಗುವ ಮೂಲಕ ವರ್ಣರಂಜಿತ ಟೂರ್ನಿಗೆ ತೆರೆಬಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧದ ವಾರಿಯರ್ಸ್ 3 ರನ್ಗಳ ಅಂತರದ ಜಯ ಸಾಧಿಸಿತು.
ಮೂರು ದಿನಗಳ ಕಾಲ ನಡೆದ ಸಿನಿಮಾ ತಾರೆಯರ ಕ್ರಿಕೆಟ್ ಹಬ್ಬಕ್ಕೆ ಕ್ರಿಕೆಟ್ ಪ್ರೇಮಿಗಳು, ಸಿನಿಮಾ ಕಲಾವಿದರ ಸಮ್ಮುಖದಲ್ಲಿ ರೋಚಕವಾಗಿ ಮುಕ್ತಾಯಗೊಂಡಿತು. ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಕಪ್ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದಿತು.
ರೋಚಕ ಫೈನಲ್ ಪಂದ್ಯ:ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ಮತ್ತು ಶಿವರಾಜ್ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ನಡುವಿನ ಫೈನಲ್ ಪಂದ್ಯ ರೋಚಕವಾಗಿತ್ತು. ಮೊದಲು ಬ್ಯಾಟ್ ಮಾಡಿದ ಗಣೇಶ್ ತಂಡ ಆರಂಭಿಕ ಆಘಾತದ ನಡುವೆಯೂ ನಿಗದಿತ 10 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 111 ರನ್ ಗಳಿಸಿತು. 32 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅವಿನಾಶ್ ಚೇತರಿಕೆ ನೀಡಿದರು. 12 ಎಸೆತಗಳಲ್ಲಿ 40 ರನ್ ಮಾಡಿದರು. ಕರಣ್ 25 ಹಾಗೂ ಪ್ರಿನ್ಸ್ 16 ರನ್ ಗಳಿಸಿದರು. ಇದರಿಂದ ತಂಡ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು. ರಾಷ್ಟ್ರಕೂಟ ಪ್ಯಾಂಥರ್ಸ್ ಪರವಾಗಿ ಬಿಗುವಿನ ಬೌಲಿಂಗ್ ಮಾಡಿದ ಪ್ರದೀಪ್ 2/2, ನಾಯಕ ಶಿವರಾಜ್ ಕುಮಾರ್ 12/1 ಹಾಗೂ ಶ್ರೀಕಾಂತ್ 24/1 ವಿಕೆಟ್ ಪಡೆದರು.
ಗೆಲುವಿನ ಸಂಭ್ರಮದಲ್ಲಿ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ಹೋರಾಡಿ ಕೊನೆಯಲ್ಲಿ ಸೋತ ಪ್ಯಾಂಥರ್ಸ್:ಸವಾಲಿನ ಗುರಿ ಬೆನ್ನಟ್ಟಿದ ಶಿವಣ್ಣ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಹೋರಾಟ ನಡೆಸಿ ಕೊನೆಯಲ್ಲಿ ಗೆಲುವನ್ನು ಕೈಚೆಲ್ಲಿತು. ಆರಂಭಿಕ, ಭಾರತದ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಹಾಗೂ ಪ್ರದೀಪ್ ಜೋಡಿ 85 ರನ್ಗಳ ಭರ್ಜರಿ ಜೊತೆಯಾಟ ನೀಡಿದರು. 29 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ ಮುನ್ನುಗ್ಗುತ್ತಿದ್ದ ಸುರೇಶ್ ರೈನಾ (51) ಪ್ರಿನ್ಸ್ ಎಸೆದ 9ನೇ ಓವರ್ನಲ್ಲಿ ಪೃಥ್ವಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇವರ ಬೆನ್ನಲ್ಲೇ ಬಂದ ದಿಲೀಪ್ ಕೆಂಪೇಗೌಡ (10) ಅದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. 24 ಎಸೆತಗಳಲ್ಲಿ 39 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪ್ರದೀಪ್ ತಂಡದ ಗೆಲುವಿಗೆ 7 ರನ್ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು.
ಇದರಿಂದ ತಂಡ ಗೆಲುವಿನ ಅಂಚಿನಲ್ಲಿ ಎಡವಿತು. ಅಂತಿಮವಾಗಿ ರಾಷ್ಟ್ರಕೂಟ ಪ್ಯಾಂಥರ್ಸ್ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಗಂಗಾ ವಾರಿಯರ್ಸ್ 3 ರನ್ಗಳ ಜಯ ಗಳಿಸಿತು. ವಾರಿಯರ್ಸ್ ಪರ ಪ್ರಿನ್ಸ್ 24/2 ಹಾಗೂ ಪೃಥ್ವಿ 26/2 ವಿಕೆಟ್ ಪಡೆದು ಮಿಂಚಿದರು.
ಶಿವಣ್ಣ ನೇತೃತ್ವದ ತಂಡಕ್ಕೆ ಡಿಕೆ ಶಿವಕುಮಾರ್ ಹಸ್ತಲಾಘವ ವರ್ಣರಂಜಿತ ತೆರೆ:ಮೂರು ದಿನ ನಡೆದ ಕ್ರಿಕೆಟ್ ಪಂದ್ಯಾವಳಿಗೆ ವರ್ಣರಂಜಿತ ತೆರೆ ಕೂಡ ಬಿತ್ತು. ಸಮಾರೋಪ ಸಮಾರಂಭದಲ್ಲಿ ಶಿವಣ್ಣ, ಗಣೇಶ್, ಉಪೇಂದ್ರ, ದುನಿಯಾ ವಿಜಯ್, ಸುದೀಪ್ ಹಾಡುಗಳಿಗೆ ನೃತ್ಯ ಮಾಡಿದರು. ಆಲ್ ಓಕೆ ಅಲೋಕ್, ಚಂದನ್ ಶೆಟ್ಟಿ ಅವರ ರ್ಯಾಪ್ ಹಾಡುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿದವು. ಸಮಾರಂಭದಲ್ಲಿ ಅನೇಕ ನಟ, ನಟಿಯರು ಪಾಲ್ಗೊಂಡಿದ್ದರು. ರುಕ್ಮಿನಿ ವಸಂತ್, ಚೈತ್ರಾ ಆಚಾರ್, ಸಪ್ತಮಿ ಗೌಡ, ಮಾಲಾಶ್ರೀ, ಪುತ್ರಿ ಆರಾಧನಾ, ರಾಗಿಣಿ, ಭಾವನಾ, ಅನುಪಮಾ ಸೇರಿದಂತೆ ಮೊದಲಾದ ಕಲಾವಿದರು ಕಾರ್ಯಕ್ರಮಕ್ಕೆ ಮೆರುಗು ತಂದರು.
ಇದನ್ನೂ ಓದಿ:'ಕೆಸಿಸಿ ಕಪ್ ದೇಶದಲ್ಲೇ ವಿನೂತನ ಪ್ರಯತ್ನ': ಫೈನಲ್ ಪಂದ್ಯ ವೀಕ್ಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್