ಬಾಲಿವುಡ್ ಸೂಪರ್ಸ್ಟಾರ್, ಹಿರಿಯ ನಟ ಅಮಿತಾಭ್ ಬಚ್ಚನ್ 'ಕೌನ್ ಬನೇಗಾ ಕರೋಡ್ಪತಿ' ಶೋ ಮೂಲಕ ಮತ್ತೊಮ್ಮೆ ನಿಮ್ಮನ್ನು ರಂಜಿಸಲು ಸಿದ್ಧರಾಗಿದ್ದಾರೆ. ಸೀಸನ್ 15 ಸದ್ಯದಲ್ಲೇ ಪ್ರಾರಂಭವಾಗಲಿದೆ. ಈ ಬಾರಿ ಕಾರ್ಯಕ್ರಮದ ಕೆಲವು ನಿಯಮಗಳು ಮತ್ತು ಸ್ವರೂಪಗಳನ್ನು ಬದಲಾಯಿಸಲಾಗಿದೆ. ಅಮಿತಾಭ್ ಬಚ್ಚನ್ ಅವರ ಲುಕ್ನಲ್ಲಿಯೂ ಚೇಂಜಸ್ ಮಾಡಲಾಗಿದೆ. ಪ್ರತಿ ಸೀಸನ್ನಲ್ಲಿಯೂ ನಟನನ್ನು ಅದ್ಭುತವಾಗಿ ಕಾಣುವಂತೆ ಮಾಡುವಲ್ಲಿ ಫ್ಯಾಷನ್ ಡಿಸೈನರ್ ಪ್ರಿಯಾ ಪಾಟೀಲ್ ಪ್ರಮುಖ ಪಾತ್ರ ವಹಿಸುತ್ತಾರೆ.
ಪ್ರಿಯಾ ಪಾಟೀಲ್ ಅವರು ಈ ಬಾರಿ ಅಮಿತಾಭ್ ಬಚ್ಚನ್ ಅವರನ್ನು ಹೊಸ ಫ್ಯಾಷನ್ ಟ್ರೆಂಡ್ನೊಂದಿಗೆ ಪರಿಚಯಿಸಲಿದ್ದಾರೆ. 'ಕೌನ್ ಬನೇಗಾ ಕರೋಡ್ಪತಿ' ಬದಲಾವಣೆ ಬಗ್ಗೆ ಮಾತನಾಡಿದ ಪ್ರಿಯಾ, "KBC ಸೀಸನ್ 15 ಗಾಗಿ ನಾವು ಹೊಸತನವನ್ನು ತರಲು ಚಿಂತಿಸಿದ್ದೇವೆ. ಕ್ಲಾಸಿಕ್ ನೋಟವನ್ನು ಹಾಗೆಯೇ ಇರಿಸಿಕೊಂಡು, ಅದಕ್ಕೆ ಒಂದಿಷ್ಟು ಅಂಶಗಳನ್ನು ಸೇರಿಸಿದ್ದೇವೆ. ಆ ಮೂಲಕ ನಾವು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ" ಎಂದು ಹೇಳಿದ್ದಾರೆ.
ಮುಂದುವರೆದು, "ಅಮಿತಾಭ್ ಬಚ್ಚನ್ ಸರ್ ಅವರು ಕ್ಲಾಸಿಕ್ ತ್ರೀ ಪೀಸ್ ಸೂಟ್ಸ್, ಬಂಧಗಲಾಸ್ ಮತ್ತು ಜೋಧ್ಪುರಿ ಸ್ಟೈಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇದರಲ್ಲಿ ನಾನು ಕಲರ್ ಪ್ಲೇ ಅನ್ನು ಪರಿಚಯಿಸುತ್ತಿದ್ದೇನೆ. ಪ್ಯಾಟರ್ನ್ಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದೇನೆ. ನೇವಿ, ಬ್ಲಾಕ್ ಆಂಡ್ ವೈಟ್, ಪೌಡರ್ ಬ್ಯೂ ಆಂಡ್ ನೇವಿ ಈ ರೀತಿಯ ಬಣ್ಣಗಳ ಫ್ಯಾಷನ್ ಡ್ರೆಸ್ಗಳನ್ನು ಈ ಬಾರಿ ಆಯ್ದುಕೊಂಡಿದ್ದೇನೆ" ಎಂದು ಪ್ರಿಯಾ ಪಾಟೀಲ್ ತಿಳಿಸಿದರು.
ಇದನ್ನೂ ಓದಿ:13 ವರ್ಷಗಳ ಹಿಂದಿನ ಟ್ವೀಟ್ ಈಗ ವೈರಲ್: ಅಮಿತಾಭ್ ಬಚ್ಚನ್ ಟ್ರೋಲ್ - ಕೌನ್ ಬನೇಗಾ ಕರೋಡ್ಪತಿಯಲ್ಲಿ ಪ್ರಶ್ನಿಸಿ ಎಂದ ನೆಟ್ಟಿಗರು!
ಅಮಿತಾಭ್ ಬಚ್ಚನ್ ಅವರಿಗೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವ ಹಂಚಿಕೊಂಡ ಪ್ರಿಯಾ, "ಅಮಿತಾಭ್ ಬಚ್ಚನ್ ಸರ್ ಒಂದು ದಂತಕಥೆ. ನಾನು ಅವರನ್ನು ಅನೇಕ ವರ್ಷಗಳಿಂದ ನೋಡುತ್ತಿದ್ದೇನೆ. ಅವರಿಂದ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ಅವರಿಗೆ ವೃತ್ತಿ ಮೇಲಿರುವ ಸಮರ್ಪಣೆ ಎಲ್ಲವನ್ನೂ ನಾನು ಗಮನಿಸಿದ್ದೇನೆ. ಸರ್ಗೆ ಯಾವುದೇ ಸ್ಟೈಲಿಶ್ ಅಗತ್ಯವಿಲ್ಲ ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ಏಕೆಂದರೆ ಅವರು ಸ್ವತಃ ಸ್ಟೈಲಿಶ್ ಐಕಾನ್. ಒಬ್ಬ ವ್ಯಕ್ತಿಯನ್ನು ಬಟ್ಟೆ ಟ್ರೆಂಡ್ ಮಾಡುವುದಿಲ್ಲ. ವ್ಯಕ್ತಿಯೇ ಬಟ್ಟೆಯನ್ನು ಟ್ರೆಂಡ್ ಆಗುವಂತೆ ಮಾಡುತ್ತಾರೆ. ಅಮಿತಾಭ್ ಬಚ್ಚನ್ ಯಾವ ದಿರಿಸು ಧರಿಸಿದರೂ ಅದು ಟ್ರೆಂಡ್ ಆಗುತ್ತದೆ. ಅವರು ಯಾವಾಗಲೂ ಎಲ್ಲ ತಲೆಮಾರು ಜನರಿಗೂ ಸ್ಫೂರ್ತಿಯಾಗಿದ್ದಾರೆ" ಎಂದು ಹೇಳಿದರು. 'ಕೌನ್ ಬನೇಗಾ ಕರೋಡ್ಪತಿ ಸೀಸನ್ 15' ಆಗಸ್ಟ್ 14 ರಂದು ಸೋನಿ ಚಾನೆಲ್ನಲ್ಲಿ ಪ್ರಸಾರವಾಗಲಿದೆ.
ಅಮಿತಾಭ್ ಬಚ್ಚನ್ ಸಿನಿಮಾ:ಬಿಗ್ ಬಿ ಮುಂದಿನ ಸಿನಿಮಾ 'ಕಲ್ಕಿ 2898 ಎಡಿ' (ಪ್ರಾಜೆಕ್ಟ್ ಕೆ). ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ದಿಶಾ ಪಟಾನಿ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣ ಮತ್ತು ಉತ್ತರ ಚಿತ್ರರಂಗದ ಹಿರಿಯ ನಟರು ಸೇರಿ ಸಿನಿಮಾ ಮಾಡುತ್ತಿದ್ದಾರೆ.
ಇದನ್ನೂ ಓದಿ:ಅರ್ಬಾಜ್ ಖಾನ್ ಬರ್ತ್ಡೇ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಹೊಸ ಲುಕ್: 'ಬಾರ್ಬಿ'ಗೆ ಹೋಲಿಸಿದ ನೆಟ್ಟಿಗರು