ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್, ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತೊಮ್ಮೆ ನಿಮ್ಮೆಲ್ಲರ ಮನೆಗೆ ಭೇಟಿ ನೀಡಲು ರೆಡಿ ಆಗಿದ್ದಾರೆ. ಬಿಗ್ ಬಿ ನಡೆಸಿಕೊಡುವ ಜನಪ್ರಿಯ ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಶೋ ಸದ್ಯದಲ್ಲೇ ಪ್ರಸಾರವಾಗಲಿದೆ. ಕಾರ್ಯಕ್ರಮದ ಮೊದಲ ಪ್ರೋಮೋ ಇಂದು ಅನಾವರಣಗೊಂಡಿದೆ.
ಈ ಬಾರಿ ಕಾರ್ಯಕ್ರಮದ ನಿಯಮಗಳು ಮತ್ತು ಸ್ವರೂಪವನ್ನು ಬದಲಾಯಿಸಲಾಗಿದೆ ಎಂದು ಪ್ರೋಮೋದಿಂದ ತಿಳಿದುಬಂದಿದೆ. ಕೌನ್ ಬನೇಗಾ ಕರೋಡ್ಪತಿ 14 ಸೀಸನ್‌ಗಳು ಯಶಸ್ವಿಯಾಗಿ ನಡೆದಿದ್ದು, 15ನೇ ಸೀಸನ್ನೊಂದಿಗೆ ಬಿಗ್ ಬಿ ಮರಳುತ್ತಿದ್ದಾರೆ. ಸೀಸನ್ 15ರಲ್ಲಿ ಅಮಿತಾಭ್ ಬಚ್ಚನ್ ಪ್ರತಿ ಬಾರಿಯಂತೆ ಬಹಳ ಉಲ್ಲಾಸದಿಂದ ಕಂಡುಬಂದಿದ್ದಾರೆ.
ಕೌನ್ ಬನೇಗಾ ಕರೋಡ್ಪತಿ ಕಿರುತೆರೆ ಪ್ರಪಂಚದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬಚ್ಚನ್ ನಿರೂಪಣೆಯಲ್ಲಿ ಮೂಡಿಬರುವ ಕಾರ್ಯಕ್ರಮ ವೀಕ್ಷಿಸಲು ಭಾರಿ ಸಂಖ್ಯೆಯ ಪ್ರೇಕ್ಷಕರು ಕಾಯುತ್ತಿರುತ್ತಾರೆ. KBC 15 ಅನಾವರಣಗೊಳಿಸಿರುವ ಪ್ರೋಮೋದಲ್ಲಿ, ಅಮಿತಾಭ್ ಬಚ್ಚನ್ ಕಾರ್ಯಕ್ರಮದ ನಿಯಮಗಳು ಮತ್ತು ಸ್ವರೂಪದಲ್ಲಿ ಬದಲಾವಣೆಯ ಕುರಿತು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶೋ ಇನ್ನಷ್ಟು ಬೆಳೆಯಲಿ ಎಂದು ಹರಸಿದ್ದಾರೆ. ತಂತ್ರಜ್ಞಾನ ಬದಲಾಗುತ್ತಿರುವುದರಿಂದ ಪ್ರದರ್ಶನದಲ್ಲಿ ಹಲವು ವಿನೂತನ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ಹಂಚಿಕೊಂಡು, 'ಮತ್ತೆ ಕೆಲಸಕ್ಕೆ ಬಂದೆ, ಶೀಘ್ರವೇ ಭೇಟಿಯಾಗೋಣ' ಎಂದು ಬರೆದಿದ್ದಾರೆ.