2022ರಲ್ಲಿ 'ಕೆಜಿಎಫ್ 2', 'ಕಾಂತಾರ', 'ವಿಕ್ರಾಂತ್ ರೋಣ', 'ವೇದ' ಸೇರಿದಂತೆ ಕೆಲವು ಸಿನಿಮಾಗಳು ತೆರೆಕಂಡು ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ನೋಡುವಂತಾಯಿತು. ಸ್ಯಾಂಡಲ್ವುಡ್ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಕಂಟೆಂಟ್, ಮೇಕಿಂಗ್, ನಿರ್ದೇಶನದ ಶೈಲಿಗೆ ಪ್ರೇಕ್ಷಕರು ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತನಾಮರಿಂದ ಪ್ರಶಂಸೆಯ ಮಳೆ ಸುರಿಯಿತು. ಆದರೆ, 2023ರ ಕೊನೆವರೆಗೂ ಸ್ಟಾರ್ ನಟರ ಬಿಗ್ ಪ್ರಾಜೆಕ್ಟ್ಗಳು ತೆರೆಗೆ ಬರಲೇ ಇಲ್ಲ.
ಆರಂಭದಲ್ಲಿ 'ಕಬ್ಜ' ತೆರೆಕಂಡು ಒಂದು ಮಟ್ಟಿಗೆ ಸದ್ದು ಮಾಡಿದ್ದು ಬಿಟ್ಟರೆ, ಬೇರಾವುದೇ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಸಿಲ್ವರ್ ಸ್ಕ್ರೀನ್‌ನಲ್ಲಿ ರಾರಾಜಿಸಲಿಲ್ಲ. ಸ್ಯಾಂಡಲ್ವುಡ್ ಮಟ್ಟಿಗೆ ತೆರೆಕಂಡ ಹಲವು ಚಿತ್ರಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಆದರೆ ಸೂಪರ್ ಸ್ಟಾರ್‌ಗಳ ಬಿಗ್ ಪ್ರಾಜೆಕ್ಟ್ ಅನ್ನು ಸಿನಿಪ್ರಿಯರು ನಿರೀಕ್ಷಿಸಿದ್ದರು. ಅಂತೂ ಇಂತೂ 2023 ಕೊನೆಯಾಗುವ ಹೊತ್ತಿಗೆ ಬಂದ ಕಾಟೇರ ನಿರೀಕ್ಷೆ ಮೀರಿದ ಗೆಲುವು ಸಾಧಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ಕಾಟೇರ ಶುಕ್ರವಾರ ಚಿತ್ರಮಂದಿರ ಪ್ರವೇಶಿಸಿತು. ಗುರುವಾರ ಮಧ್ಯರಾತ್ರಿಯಿಂದಲೇ ಥಿಯೇಟರ್‌ಗಳ ಬಳಿ ಅಭಿಮಾನಿಗಳ ಹಬ್ಬಾಚರಣೆ ಶುರುವಾಗಿತ್ತು. ಬಹುನಿರೀಕ್ಷಿತ ಸಿನಿಮಾವನ್ನು ಸಿನಿಪ್ರಿಯರು ಅದ್ಧೂರಿಯಾಗಿ ಸ್ವಾಗತಿಸಿದ್ದರು. ಸಿನಿಮಾ ಬಹುತೇಕ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ. ತೆರೆಕಂಡ ಮೊದಲ ದಿನವೇ 19 ಕೋಟಿ 75 ಲಕ್ಷ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಕಾಟೇರ ಎರಡು ದಿನಗಳಲ್ಲಿ ಸರಿಸುಮಾರು 40 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ವರದಿಗಳು ಹೇಳುತ್ತಿವೆ. ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದರ್ಶನ್, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.