ನವ ದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕುರಿತಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲಪಿಡ್ ಹೇಳಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯ ಅಥವಾ ಅಲ್ಲಿ ನೋವನ್ನು ಅನುಭವಿಸಿದವರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ಮುಕ್ತಾಯಗೊಂಡ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ದಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರ ಕೂಟದ ಅಧ್ಯಕ್ಷರಾಗಿದ್ದ ಲಪಿಡ್, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು 'ಅಶ್ಲೀಲ' ಎಂದು ಟೀಕಿಸಿದ್ದರು. ಇದು ಭಾರಿ ವಿವಾದವನ್ನು ಹುಟ್ಟುಹಾಕಿತ್ತು.
ಇದನ್ನೂ ಓದಿ:'ದಿ ಕಾಶ್ಮೀರ್ ಫೈಲ್ಸ್ ಅಶ್ಲೀಲ ಚಲನಚಿತ್ರ': ನಡಾವ್ ಲಪಿಡ್ ವ್ಯಂಗ್ಯ
'ಚಿತ್ರದಲ್ಲಿರುವ ಸಿನೆಮ್ಯಾಟಿಕ್ ಮ್ಯಾನ್ಯುಪುಲೇಶನ್ಗಾಗಿ ಟೀಕಿಸಿದ್ದೇನೆ. ಯಾರನ್ನೂ ಅವಮಾನ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ತಪ್ಪಾಗಿ ಅರ್ಥೈಸಿಕೊಂಡಿರುವುದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಅದೇ ಸಮಯದಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಅದು ನನಗೆ ಮತ್ತು ನನ್ನ ಸಹಜ್ಯೂರಿ ಸದಸ್ಯರಿಗೆ ಅಸಭ್ಯ ಪ್ರಚಾರದ ಚಲನಚಿತ್ರವಾಗಿ ಕಂಡುಬಂದಿದ್ದು, ಪ್ರತಿಷ್ಠಿತ ಸ್ಪರ್ಧಾತ್ಮಕ ವಿಭಾಗದಲ್ಲಿ ಸ್ಪರ್ಧಿಸಲು ಸೂಕ್ತವಲ್ಲ. ನಾನು ಅದನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ 1990ರ ದಶಕದ ಆರಂಭದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಉಗ್ರಗಾಮಿಗಳ ಅಟ್ಟಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಇದನ್ನು ಗೋವಾ ಚಲನಚಿತ್ರೋತ್ಸದ ಭಾರತೀಯ ಪನೋರಮಾ ವಿಭಾಗದ ಅಡಿಯಲ್ಲಿ ನವೆಂಬರ್ 22 ರಂದು ಪ್ರದರ್ಶಿಸಲಾಗಿತ್ತು.
ಇದನ್ನೂ ಓದಿ:ದೇವರು ಅವರಿಗೆ ಬುದ್ಧಿ ಕೊಡಲಿ: ಲಪಿಡ್ ಹೇಳಿಕೆಗೆ ಅನುಪಮ್ ಖೇರ್ ಕಿಡಿ