ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ಗೆ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಎಂಬ ಸಿನಿಮಾ ಮಾಡಿ ಭರವಸೆ ನಿರ್ದೇಶಕ ಅಂತಾ ಗುರುತಿಸಿಕೊಂಡಿದ್ದ ಯೋಗಿ ಜಿ ರಾಜ್, ಶಿವಣ್ಣನಿಗೆ ಮತ್ತೊಂದು ಸಿನಿಮಾ ಮಾಡಲು ಒಳ್ಳೆ ಕಥೆಯೊಂದನ್ನು ಹುಡುಕಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು. ಸಿನಿಮಾ ವಿತರಣೆ ಹಾಗು ಸಿನಿಮಾ ನಿರ್ಮಾಣದಲ್ಲಿ ಮಂಚೂಣಿಯಲ್ಲಿರುವ ನಿರ್ದೇಶಕ ಯೋಗಿ ಜಿ ರಾಜ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಮತ್ತೆ ಯಾವಾಗ ಆ್ಯಕ್ಷನ್ ಕಟ್ ಹೇಳೋದು ಎಂಬ ವಿಚಾರಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.
ನಿರ್ದೇಶನ ಬಿಟ್ಟು ಕಂಪ್ಲೀಟ್ ಆಗಿ ಸಿನಿಮಾ ವಿತರಣೆ ಹಾಗೂ ನಿರ್ಮಾಣ ಮಾಡೋ ಕೆಲಸದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಯೋಗಿ ಅವರಿಗೆ ಈ ವೇಳೆ ಶಿವಣ್ಣನಿಗೆ ಯಾವಾಗ ಸಿನಿಮಾ ಮಾಡುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮತ್ತೆ ದೊಡ್ಮನೆಯ ಮಗ ಶಿವರಾಜ್ ಕುಮಾರ್ ಅವರಿಗೆ ಮತ್ತೊಂದು ಸಿನಿಮಾ ಮಾಡಬೇಕು. ಒಳ್ಳೆ ಕಥೆಯನ್ನು ಮಾಡಿ ಶಿವಣ್ಣನ ಜೊತೆ ಸಿನಿಮಾ ಮಾಡಬೇಕು ಅನ್ನೋದು ನನಗೆ ತುಂಬಾ ಆಸೆ ಇದೆ. ಶಿವಣ್ಣ ಕೂಡ ಅವರ ವೇದ ಸಿನಿಮಾದ ಸಕ್ಸಸ್ ಮೀಟ್ ನಲ್ಲೂ ಯೋಗಿ ಮತ್ತೆ ಸಿನಿಮಾ ನಿರ್ದೇಶನ ಯಾವಾಗ ಅಂತಾ ಕೇಳಿದ್ದಾರೆ. ಅದಷ್ಟು ಬೇಗ ಶಿವಣ್ಣನ ಇವತ್ತಿನ ಟ್ರೆಂಡ್ ಗೆ ತಕ್ಕಂತೆ ಕಥೆ ಮಾಡಿ ಚಿತ್ರ ಮಾಡುತ್ತೇನೆ ಎಂದು ಯೋಗಿ ಹೇಳಿದರು.
ಈ ಸಿನಿಮಾ ಎಂಬ ಕ್ರಿಯೇಟಿವ್ ವರ್ಲ್ಡ್ನಲ್ಲಿ ಟ್ಯಾಲೆಂಟ್ ಜೊತೆ ಅದೃಷ್ಟ ಇದ್ದರೆ ತಾವು ಅಂದುಕೊಂಡಂತೆ ಸಾಧಿಸಬಹುದು. ಈ ಮಾತನ್ನು ಈಗಾಗಲೇ ಸಾಕಷ್ಟು ನಟರು ಹಾಗು ನಿರ್ದೇಶಕರು ನಿಜ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರಾದ ಯೋಗಿ ಕಾಲೇಜು ದಿನಗಳಿಂದಲೇ ಸಿನಿಮಾ ನಿರ್ದೇಶಕನಾಗಬೇಕು ಅಂತಾ ಕನಸು ಕಂಡು ಈ ಮಾಯಾ ಬಜಾರ್ ಎಂಬ ಗಾಂಧಿನಗರಕ್ಕೆ ಬಂದು, ನಿರ್ದೇಶಕರಾದ ಪ್ರೀತಮ್ ಗುಬ್ಬಿ ಮತ್ತು ಎ ಹರ್ಷರಂತಹ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಲೇ ಕಾಸ್ಟೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದರು.