ಬಾಲಿವುಡ್ ಗಣ್ಯರು ತಮ್ಮ ಸಹೋದ್ಯೋಗಿಗಳು, ಆಪ್ತರಿಗಾಗಿ ದೀಪಾವಳಿ ಸಂತೋಷಕೂಟ ಆಯೋಜಿಸುವ ಪದ್ಧತಿ ಇದೆ. ಕಳೆದೊಂದು ವಾರದಿಂದಲೂ ಬಾಲಿವುಡ್ನಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗುರುವಾರ ರಾತ್ರಿ ಪಟೌಡಿ ವಂಶದ ಕುಡಿ ಸಾರಾ ಅಲಿ ಖಾನ್ ತಮ್ಮ ಮುಂಬೈ ನಿವಾಸದಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಸಮಾರಂಭಕ್ಕೆ ಮಾಜಿ ವದಂತಿಯ ಗೆಳೆಯ ಕಾರ್ತಿಕ್ ಆರ್ಯನ್ ಸೇರಿದಂತೆ ಹಲವು ಗಣ್ಯರು ಬಂದಿದ್ದರು.
ಸಾರಾ ಅಲಿ ಖಾನ್ ಅವರ ಅನೇಕ ಆಪ್ತರು ಈವೆಂಟ್‌ನಲ್ಲಿ ಕಂಡುಬಂದರು. ಮುಂಬೈ ಮೂಲದ ಪಾಪರಾಜಿಯೋರ್ವರು ಕಾರ್ತಿಕ್ ಆರ್ಯನ್ ಅವರು ಸಾರಾ ಅವರ ಮನೆ ಪ್ರವೇಶಿಸುತ್ತಿರುವ ದೃಶ್ಯವನ್ನು ತಮ್ಮ ಸೆರೆಹಿಡಿದಿದ್ದಾರೆ. ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು-ನೆಟ್ಟಿಗರು ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ.
ಕಾರ್ತಿಕ್ ಆರ್ಯನ್ ಹಳದಿ ಕುರ್ತಾ, ಬಿಳಿ ಪೈಜಾಮ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು. ನಟನ ಕ್ಲೀನ್ ಶೇವ್ ಲುಕ್ ಅದೆಷ್ಟೋ ಯುವತಿಯರ ಮನಕದ್ದಿದೆ. ನಟಿಯ ಮನೆಯ ಹೊರಗೆ ನಿಂತಿದ್ದ ಪಾಪರಾಜಿಗಳ ಕ್ಯಾಮರಾಗಳಿಗೆ ನಟ ನಗುಮೊಗದ ಪೋಸ್ ನೀಡಿದರು.
ಸಾರಾ ಕಾರ್ತಿಕ್ ಜೋಡಿ ಇಮ್ತಿಯಾಜ್ ಅಲಿ ಅವರ ಲವ್ ಆಜ್ ಕಲ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಂದರ್ಭವೇ ಡೇಟಿಂಗ್ನಲ್ಲಿದ್ದಾರೆಂದು ವದಂತಿಗಳು ಹರಡಿತ್ತು. ಆದಾಗ್ಯೂ ಕೆಲ ದಿನಗಳಲ್ಲೇ ಬೇರ್ಪಟ್ಟರು ಎಂದೂ ಕೂಡ ಹೇಳಲಾಗಿದೆ. ಕಾಫಿ ವಿಥ್ ಕರಣ್ ಸೀಸನ್ 8ರ ಮೂರನೇ ಸಂಚಿಕೆಯಲ್ಲಿ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ನಿನ್ನೆ ಈ ಶೋ ಒಟಿಟಿಯಲ್ಲಿ ಹೊರಬಿದ್ದಿದೆ. ಚಾಟ್ ಶೋನಲ್ಲಿ ಸಾರಾ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಹಿಂದಿನ ಸಂಬಂಧಗಳು, ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಪ್ರಬುದ್ಧವಾಗಿ ಮಾತನಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.