ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮೊದಲ ಬಾರಿಗೆ ಈ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. 'ಭೂಲ್ ಚುಕ್ ಮಾಫ್' ಚಿತ್ರದಿಂದ ಮೊದಲ ಬಾರಿಗೆ ಈ ಜೋಡಿ ಪ್ರೇಕ್ಷಕರನ್ನು ರಂಜಿಸಲಿದೆ. ಈ ಬಗ್ಗೆ ಜಿಯೋ ಸ್ಟುಡಿಯೋ ತಂಡ ಮಾಹಿತಿ ನೀಡಿದೆ. ಆದರೆ, ಸಿನಿಮಾ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಅಲ್ಲದೇ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ತೂ ಜೂಟಿ ಮೇ ಮಕ್ಕರ್' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
'ತೂ ಜೂಟಿ ಮೇ ಮಕ್ಕರ್' ಸಿನಿಮಾದಲ್ಲಿ ಪರದೆಯ ಮೇಲೆ ಇವರಿಬ್ಬರು ಕಾಣಿಸಿಕೊಂಡಿದ್ದರು. ಆದರೆ, ಇಡೀ ಚಿತ್ರದಲ್ಲಿ ಇವರೇ ಜೋಡಿಯಾಗಿ ಮೊದಲ ಬಾರಿಗೆ 'ಭೂಲ್ ಚುಕ್ ಮಾಫ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕರಣ್ ಶರ್ಮಾ ನಿರ್ದೇಶಿಸಲಿದ್ದಾರೆ. ಈ ಜೋಡಿಯ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ.
ಬುಧವಾರ, ಜಿಯೋ ಸ್ಟುಡಿಯೋಸ್ ತನ್ನ 100 ಚಲನಚಿತ್ರಗಳನ್ನು ಪೂರೈಸಿದೆ. ಆ ಎಲ್ಲ ಚಿತ್ರಗಳ ಮಾಹಿತಿ ನೀಡಿರುವ ತಂಡವು ಈವೆರೆಗೆ ತಯಾರಾದ ಮತ್ತು ತಯಾರಾಗುವ ಚಿತ್ರಗಳ ಹೆಸರನ್ನು ಉಲ್ಲೇಖಿಸಿದೆ. ಈ ವೇಳೆ, ಕಾರ್ತಿಕ್ ಮತ್ತು ಶ್ರದ್ಧಾ ಜೋಡಿಯಾಗಿ 'ಭೂಲ್ ಚುಕ್ ಮಾಫ್' ರೊಮ್ಯಾಂಟಿಕ್ ಕಾಮಿಡಿ ಚಿತ್ರವೊಂದು ತಯಾರಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಇದೇ ವೇಳೆ, ವರುಣ್ ಧವನ್ ಅವರ ಭೇದಿಯಾ-2 ಮತ್ತು ರಾಜ್‌ಕುಮಾರ್ ರಾವ್ ಅವರ ಸ್ತ್ರೀ 2 ಸಿನಿಮಾವನ್ನು ಘೋಷಿಸಲಾಯಿತು.