ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಜೆ.ಕೆ / ಕಾರ್ತಿಕ್ ಜಯರಾಮ್. ಫಿಟ್ನೆಸ್ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವ ಜೆ.ಕೆ ಸಿನಿಮಾವೊಂದರಲ್ಲಿ ಬ್ಯುಸಿಯಾಗಿರುವುದು ನಿಮಗೆ ತಿಳಿದೇ ಇದೆ. ಕಾರ್ತಿಕ್ ಜಯರಾಮ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಐರಾವನ್'. ಸಿನಿಮಾ ಬಿಡುಗಡೆಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಸದ್ಯ ಟ್ರೇಲರ್ ಹಾಗೂ ಹಾಡುಗಳಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ 'ಐರಾವನ್' ಚಿತ್ರದ ಬಗ್ಗೆ ನಟ ಕಾರ್ತಿಕ್ ಜಯರಾಮ್, ನಟಿ ಅದ್ವಿತಿ ಶೆಟ್ಟಿ ಹಾಗೂ ನಿರ್ದೇಶಕ ರಾಮ್ಸ್ ರಂಗ ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಕಾರ್ತಿಕ್ ಜಯರಾಮ್ ಮಾತನಾಡಿ, ಐರಾವನ್ ಚಿತ್ರದ ಟೀಸರ್ಗೆ ನಿಮ್ಮಿಂದ ಸಿಕ್ಕಿರುವ ಪ್ರೋತ್ಸಾಹಕ್ಕೆ ನಾನು ಚಿರಋಣಿ. ಕೆಲವರಿಗೆ ಈ ಚಿತ್ರದ ಬಗ್ಗೆ ಗೊಂದಲವಿತ್ತು. ಇದು ಹಿಂದಿ ಚಿತ್ರದ ಡಬ್ ಇರಬಹುದು ಎಂದು ಹಲವರು ಊಹಿಸಿದ್ದರು. ಆದರೆ ಇದು ಪಕ್ಕಾ ಕನ್ನಡ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಯಾಂಡಲ್ವುಡ್ ಸಿನಿಮಾ ಇದು. ಎರಡು ಶೇಡ್ಗಳಲ್ಲಿ ನನ್ನ ಪಾತ್ರವಿರುತ್ತದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಹಾಡುಗಳು ಬಹಳ ಚೆನ್ನಾಗಿದೆ. ನಿರ್ಮಾಪಕ ಡಾ. ನಿರಂತರ ಗಣೇಶ್ ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಜೂನ್ 16ರಂದು ನಮ್ಮ ಈ ಚಿತ್ರ ತೆರೆ ಕಾಣಲಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ರಾಮ್ಸ್ ರಂಗ ಮಾತನಾಡಿ, 'ಐರಾವನ್' ಎಂದರೆ ಮಹಾಭಾರತದಲ್ಲಿ ಬರುವ ಪಾತ್ರವೊಂದರ ಹೆಸರು. ಐರಾವನ್ ಹೆಸರಿನ ನಮ್ಮ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಸಮುದ್ರದ ಬಳಿ ಹೆಚ್ಚಿನ ಚಿತ್ರೀಕರಣ ಮಾಡಿರುವುದು ಚಿತ್ರದ ವಿಶೇಷ ಎಂದರು.