ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ದಾಖಲೆಯ ಬಜೆಟ್ ಮಂಡಿಸಿದ್ದು, ಜನಪರ ಕಾಳಜಿ ಜೊತೆಗೆ ಕನ್ನಡ ಚಿತ್ರರಂಗಕ್ಕೂ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಈ ಮೂಲಕ ಸಿಎಂ ಸಿನಿಮಾ ರಂಗದ ಪರವಾಗಿ ನಿಂತುಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಬೇಡಿಕೆಗಳ ಜೊತೆಗೆ ಸಮಸ್ಯೆಗಳಿದ್ದರೂ ಕೂಡ ಕಳೆದ ಬಾರಿಯ ಬಜೆಟ್ಗೆ ಹೋಲಿಸಿದರೆ, ಈ ಬಾರಿ ಚಿತ್ರರಂಗಕ್ಕೆ ಹೆಚ್ಚೇ ಮಹತ್ವ ನೀಡಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿ ಫಿಲ್ಮ್ ಸಿಟಿ: ಚಿತ್ರರಂಗದ ಬೇಡಿಕೆಯಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲೇ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಡಾ.ರಾಜ್ಕುಮಾರ್ ಕಾಲದಿಂದಲೂ ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ಬೇಕು ಅನ್ನೋ ಮಾತು ಕೇಳಿಬರುತ್ತಿತ್ತು. ಪ್ರತಿ ಬಾರಿಯೂ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತಾರೆ. ಆದರೆ ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದರೆ, ಫಿಲ್ಮ್ ಸಿಟಿ ಕೇವಲ ಘೋಷಣೆಯಾಗಿಯೇ ಉಳಿದುಬಿಡುತ್ತದೆ.
2015-16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿ ಸ್ಥಾಪಿಸಲು ಘೋಷಿಸಲಾಗಿತ್ತು. ನಂತರದ ಸರ್ಕಾರವು ಫಿಲ್ಮ್ ಸಿಟಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲು ಉದ್ದೇಶಿಸಿತ್ತು. ಆದರೆ, ಇಲ್ಲಿವರೆಗೂ ಅನುಷ್ಠಾನಗೊಂಡಿಲ್ಲ. ಈ ಬಾರಿ ಮೈಸೂರು ಜಿಲ್ಲೆಯಲ್ಲೇ ಚಿತ್ರನಗರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಇತಿಹಾಸವನ್ನು ಸಾರುವಂತಹ ವಸ್ತು ಸಂಗ್ರಹಾಲಯ ಬೇಕು ಎನ್ನುವುದು ಸಿನಿಮಾ ಇತಿಹಾಸಕಾರರ ಒತ್ತಾಯ ಆಗಿತ್ತು. ಆದರೆ ಹಿಂದಿನ ಸರ್ಕಾರಗಳು ಈ ಬಗ್ಗೆ ಚಿಂತನೆ ಮಾಡಿರಲಿಲ್ಲ. ಈಗ ಸಿಎಂ ಸಿದ್ದರಾಮಯ್ಯ ಸರ್ಕಾರ ವಸ್ತು ಸಂಗ್ರಹಾಲಯ ಮಾಡುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಇತಿಹಾಸ, ಅದು ಬೆಳೆದು ಬಂದ ಇತಿಹಾಸ ತಿಳಿಸುವ ಸಂಗ್ರಹಾಯಲವನ್ನು ಬೆಂಗಳೂರಿನ ಕಂಠೀರವದಲ್ಲಿರುವ ಡಾ ರಾಜ್ ಕುಮಾರ್ ಸ್ಮಾರಕದ ಬಳಿ ನಿರ್ಮಾಣ ಮಾಡುಲಾಗುವುದು. ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಈ ಯೋಜನೆಗೆ ಆಯ್ಕೆ ಸಮಿತಿ ರಚಿಸಿ ಮತ್ತು ಸಹಾಯ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದರ ಜೊತೆಗೆ ಡಾ.ರಾಜ್ಕುಮಾರ್ ಸ್ಮಾರಕದ ಬಳಿ ವಸ್ತು ಸಂಗ್ರಹಾಲಯದ ಜೊತೆಗೆ ಸುಸಜ್ಜಿತ ಥಿಯೇಟರ್ ನಿರ್ಮಾಣವಾಗಬೇಕು ಎನ್ನುವುದು ಹಲವರ ಕೋರಿಕೆಯಾಗಿತ್ತು. ಜೊತೆಗೆ ಡಾ.ರಾಜ್ಕುಮಾರ್ ಅವರ ಕುರಿತಾಗಿಯೇ ವಸ್ತು ಸಂಗ್ರಹಾಲಯ ಇರಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಅದರಂತೆ ಸಮಗ್ರ ಚಿತ್ರರಂಗವನ್ನು ಒಳಗೊಳ್ಳುವಂತಹ ಸಂಗ್ರಹಾಲಯ ನಿರ್ಮಾಣ ಮಾಡಲು ಈ ಸರ್ಕಾರ ಮುಂದಾಗಿದೆ.
ಕನ್ನಡದ ಸಿನಿಮಾಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಕಳೆದ ಮೂರು ವರ್ಷಗಳಿಂದ ನೀಡಿರಲಿಲ್ಲ. ನಾನಾ ರೀತಿಯ ಕಾರಣಗಳನ್ನು ಕೊಡುತ್ತಲೇ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪುನೀತ್ ಹೆಸರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅನುದಾನ: ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಸಿನಿ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ಹೃದಯಾಘಾತದಿಂದ ಅಪ್ಪು ನಿಧನರಾದಾಗ ಆ ಸಾವಿನ ಬಗ್ಗೆ ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗಿತ್ತು. ಪುನೀತ್ ಅವರಿಗೆ ಹಠಾತ್ ಎದೆ ನೋವು ಕಾಣಿಸಿಕೊಂಡಾಗ ಯಾವ ರೀತಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಬೇಕಿತ್ತು ಎಂದೆಲ್ಲಾ ಚರ್ಚೆಗಳು ನಡೆದಿದ್ದವು.
ಅದೆಲ್ಲವನ್ನೂ ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ಪುನೀತ್ ಹೆಸರಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಂದಷ್ಟು ಅನುದಾನ ನೀಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಇದರ ಜೊತೆಗೆ ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ ಆಯ್ಕೆ ಸಮಿತಿಗಳನ್ನು ರಚಿಸಿ, ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಗುಣಾತ್ಮಕ ಕನ್ನಡ ಚಿತ್ರಗಳ ನಿರ್ಮಾಪಕರ ಸಹಾಯಕ್ಕೆ ನಿಂತಿದ್ದಾರೆ. ಒಟ್ಟಾರೆ ಕಳೆದ ಸರ್ಕಾರದ ಬಜೆಟ್ಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಚಿತ್ರರಂಗಕ್ಕೆ ಅನುಕೂಲವಾಗುವ ಯೋಜನೆಗಳು ಘೋಷಣೆಯಾಗಿದ್ದು, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಮತ್ತಷ್ಟು ಸಹಾಯಕ ಆಗಲಿದೆ.
ಇದನ್ನೂ ಓದಿ:Karnataka Budget: ಮೈಸೂರಿನಲ್ಲಿ ಫಿಲ್ಮ್ ಸಿಟಿ; ಕಲಬುರಗಿಯಲ್ಲಿ ಜಾನಪದ ಲೋಕ ಸ್ಥಾಪನೆ