'ಮುದ್ದಿನ ಅಳಿಯ' ಕನ್ನಡ ಚಿತ್ರರಂಗದಲ್ಲಿ ನಟ ಶಶಿಕುಮಾರ್ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ. ಈ ಸಿನಿಮಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ 'ಕರ್ನಾಟಕದ ಅಳಿಯ' ಚಿತ್ರಕ್ಕೂ ಒಂದು ಸಂಬಂಧ ಇದೆ. ಪ್ರಥಮ್ ನಿರ್ದೇಶನ ಮಾಡಿರುವ ಕರ್ನಾಟಕದ ಅಳಿಯ ಚಿತ್ರದಲ್ಲಿ ಶಶಿಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಕರ್ನಾಟಕದ ಅಳಿಯ ಚಿತ್ರದ ಹಾಡೊಂದು ಬಿಡುಗಡೆ ಆಗಿದ್ದು, ಶಶಿಕುಮಾರ್ ಫಿದಾ ಆಗಿದ್ದಾರೆ.
ಸಾಂಗ್ ರಿಲೀಸ್: ಮನಸಿಗೆ ಹಿಡಿಸಿದನು ಇವನು ಎಂಬ ಹಾಡನ್ನು ಅನಾವರಣಗೊಳಿಸಲಾಗಿದೆ. ಕೆ. ರಾಮನಾರಾಯಣ್ ಹಾಡಿಗೆ ಸಾಹಿತ್ಯ ಬರೆದಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ಅದಿತಿ ಸಾಗರ್ ಹಾಡಿದ್ದಾರೆ.
'ಪ್ರಥಮ್ ಕರ್ನಾಟಕದ ಅಳಿಯ ಆಗಿದ್ದಾರೆ':ಸಾಂಗ್ ಲಾಂಚ್ ಈವೆಂಟ್ನಲ್ಲಿ ಶಶಿಕುಮಾರ್ ಮಾತನಾಡಿ, ನಮ್ಮಲ್ಲಿ ಮುದ್ದಿನ ಅಳಿಯ, ಗಡಿಬಿಡಿ ಅಳಿಯ ಹೀಗೆ ಸಾಕಷ್ಟು ಜನ ಅಳಿಯಂದಿರಿದ್ದೀವಿ. ಈಗ ಪ್ರಥಮ್ ಕರ್ನಾಟಕದ ಅಳಿಯ ಆಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರು ಹಾಡು ಬಿಡುಗಡೆಗೆ ಆಗಮಿಸುತ್ತೇನೆ ಎಂದು ತಿಳಿಸಿದ್ದರು. ಆದ್ರೆ ಅನಾರೋಗ್ಯ ಕಾರಣದಿಂದಾಗಿ ಬಂದಿಲ್ಲ. ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅವರು ಹೇಳಿರುವ ಪ್ರೀತಿಯ ಮಾತುಗಳಿಗೆ ನಾನು ಆಭಾರಿ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ. ಅನಾವರಣಗೊಂಡಿರುವ ಈ ಹಾಡು ಇಂಪಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲಲಿ ಎಂದು ಶುಭ ಹಾರೈಸಿದರು.