ಡಿಯೋಲ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಮದುವೆಗೆ ಅದ್ಧೂರಿ ತಯಾರಿ ಶುರುವಾಗಿದೆ. ವರದಿಗಳ ಪ್ರಕಾರ, ಸನ್ನಿ ಡಿಯೋಲ್ (Sunny Deol) ಅವರ ಪುತ್ರ ಕರಣ್ ಡಿಯೋಲ್ (Karan Deol) ಜೂನ್ 18ರಂದು ಗೆಳತಿಯ ಕೈ ಹಿಡಿಯುವ ಖುಷಿಯಲ್ಲಿದ್ದಾರೆ.
ಮದುವೆ ಶಾಸ್ತ್ರಗಳ ಕುರಿತು ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಕ್ಷಣ ಕ್ಷಣದ ಫೋಟೋಗಳನ್ನು ಶೇರ್ ಮಾಡುವಂತೆ ಅವರು ಬೇಡಿಕೆ ಇಡುತ್ತಿದ್ದಾರೆ. ಸದ್ಯ ಕೆಲವು ಫೋಟೋಗಳು ಹೊರಬಿದ್ದಿವೆ. ಸನ್ನಿ ಡಿಯೋಲ್ ಅವರ ಮನೆ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ. ಅತಿಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಈ ವಿಶೇಷ ಸಂದರ್ಭವನ್ನು ಆಚರಿಸುತ್ತಿರುವುದು ಕಂಡುಬಂದಿದೆ.
ಸನ್ನಿ ಡಿಯೋಲ್ ತಮ್ಮ ಮನೆಯೊಳಗೆ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಅವರು ನೀಲಿ ಬಟ್ಟೆ ಧರಿಸಿರುವುದನ್ನು ಕಾಣಬಹುದು. ವರನ ತಂದೆಯಾಗಿ, ತಮ್ಮ ಮನೆಯಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಿರುವುದು ಚಿತ್ರಗಳಲ್ಲಿದೆ. ಬಾಬಿ ಡಿಯೋಲ್ ಕೂಡ ಮನೆಯಲ್ಲಿ ಕಾಣಿಸಿಕೊಂಡರು. ಡಿಯೋಲ್ ಸಹೋದರರು ಅಭಯ್ ಡಿಯೋಲ್ ಜೊತೆ ಕ್ಯಾಮರಾಗೆ ಪೋಸ್ ಕೊಡಲು ಹೊರ ಬಂದಿದ್ದರು.
'ಜಿಂದಗಿ ನಾ ಮಿಲೇಗಿ ದೊಬಾರಾ' ನಟ ಅಭಯ್ ಡಿಯೋಲ್ ಎಂದಿನಂತೆ ತಮ್ಮ ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಟಿ ಶರ್ಟ್, ಡೆನಿಮ್, ಪ್ರಿಂಟೆಡ್ ಜಾಕೆಟ್ ಧರಿಸಿದ್ದರು. ಬಾಬಿ ಡಿಯೋಲ್ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಇವರಲ್ಲದೇ, ಹಲವಾರು ಸೆಲೆಬ್ರಿಟಿಗಳು ಮದುವೆ ಮನೆಗೆ ಆಗಮಿಸಲು ಪ್ರಾರಂಭಿಸಿದ್ದಾರೆ.