ಬಾಲಿವುಡ್ ಬೆಡಗಿಯರಾದ ಕರೀನಾ ಕಪೂರ್ ಖಾನ್, ಕೃತಿ ಸನೋನ್ ಮತ್ತು ಟಬು ಅವರನ್ನು ಒಳಗೊಂಡ ಮುಂಬರುವ ಹಾಸ್ಯ ಚಲನಚಿತ್ರ ದಿ ಕ್ರ್ಯೂ (The Crew)ಗೆ ಹೊಸ ಕಲಾವಿದರ ಎಂಟ್ರಿ ಆಗಿದೆ. ರಿಯಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಾಣದ ಮುಂಬರುವ ಈ ಚಿತ್ರದಲ್ಲಿ ಜನಪ್ರಿಯ 'ದಿ ಕಪಿಲ್ ಶರ್ಮಾ ಶೋ'ನ ನಿರೂಪಕ ಕಪಿಲ್ ಶರ್ಮಾ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಪ್ರೇಕ್ಷಕರಿಗೆ ಸಿಹಿ ಅಚ್ಚರಿಯನ್ನುಂಟು ಮಾಡಿದೆ.
ಕಪಿಲ್ ಶರ್ಮಾ ಅವರು ಶೀಘ್ರದಲ್ಲೇ ಈ ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ವಿದೇಶದಲ್ಲಿ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಕೃತಿ ಮತ್ತು ಕರೀನಾ ಕಳೆದ ತಿಂಗಳು ತಮ್ಮ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈ ವಾರ ಟಬು ಅವರೊಂದಿಗೆ ಸೇರಿಕೊಂಡರು. ವರದಿ ಪ್ರಕಾರ, ದಿಲ್ಜಿತ್ ದೋಸಾಂಜ್ ಅವರನ್ನು ಪ್ರಮುಖವಾಗಿ ಒಳಗೊಂಡಿರುವ ಈ ಚಲನಚಿತ್ರವನ್ನು ರಾಜೇಶ್ ಕೃಷ್ಣನ್ ನಿರ್ದೇಶಿಸುತ್ತಿದ್ದಾರೆ.
ನಿರ್ಮಾಪಕರಾದ ಏಕ್ತಾ ಕಪೂರ್ ಪ್ರಕಾರ, ''ದಿ ಕ್ರ್ಯೂ ವೀಕ್ಷಕರಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುತ್ತದೆ. ಪ್ರತಿಯೊಬ್ಬ ಸದಸ್ಯರ ಸಹಕಾರಿ ಪ್ರಯತ್ನಗಳು ಮೋಡಿ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ. ದಿ ಕ್ರ್ಯೂ ಮೂಲಕ ನನ್ನ ತಂಡದೊಂದಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುವ ಕಥೆಯನ್ನು ರಚಿಸಲು ನಾನು ಉತ್ಸುಕಳಾಗಿದ್ದೇನೆ. ಅಂತಹ ಅದ್ಭುತವಾದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಹೊಂದಿರುವ ಈ ಚಿತ್ರ ಟೀಮ್‌ವರ್ಕ್ ಮತ್ತು ಕಲ್ಪನೆಯ ಶಕ್ತಿಗೆ ಸಾಕ್ಷಿಯಾಗಲಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.