ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಆ್ಯಕ್ಷನ್ ಕಟ್ ಹೇಳಿರುವ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಲಾಲ್ ಸಲಾಮ್'. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ 2024ರ ಸಂಕ್ರಾಂತಿ ಸಂದರ್ಭ ತೆರೆಕಾಣಲಿದೆ. ರಜನಿ ಪ್ರಮುಖ ಪಾತ್ರದಲ್ಲಿರುವ ಬಹುನಿರೀಕ್ಷಿತ ಚಿತ್ರ ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.
ವಿಶೇಷ ಪಾತ್ರದಲ್ಲಿ ಕಪಿಲ್ ದೇವ್:ಕ್ರಿಕೆಟ್ ಕಥೆಯಾಧಾರಿತ ಈ ಸಿನಿಮಾದಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಕೂಡ ನಟಿಸಿದ್ದಾರೆ. ಹೌದು, ವಿಶೇಷ ಪಾತ್ರದಲ್ಲಿ ಕಪಿಲ್ ದೇವ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಕಪಿಲ್ ದೇವ್ ತಮ್ಮ ದೃಶ್ಯಗಳಿಗೆ ದನಿ ನೀಡಿದ್ದಾರೆ. ಡಬ್ಬಿಂಗ್ ಕೆಲಸ ಪೂರ್ಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಡಬ್ಬಿಂಗ್ ಕೆಲಸ ಪೂರ್ಣ:ಚಿತ್ರತಂಡ ಡಬ್ಬಿಂಗ್ ಸ್ಟುಡಿಯೋದಲ್ಲಿ ಮಾಜಿ ಕ್ರಿಕೆಟಿಗನಿರುವ ಫೋಟೋಗಳನ್ನು ಹಂಚಿಕೊಂಡು, ಲೆಜೆಂಡರಿ ಕ್ರೀಡಾಪಟು ನಮ್ಮ ಚಿತ್ರದಲ್ಲಿರುವುದು ನಮಗೆ ಗೌರವದ ವಿಷಯ ಎಂದು ತಿಳಿಸಿದೆ. ಕಪಿಲ್ ದೇವ್ ಹೊರತುಪಡಿಸಿ, ಜೀವಿತಾ ರಾಜಶೇಖರ್ ಈ ಚಿತ್ರದಲ್ಲಿ ರಜನಿಕಾಂತ್ ಅವರ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರೋಷಾ, ತಂಬಿ ರಾಮಯ್ಯ, ಸೆಂಥಿಲ್ ಮತ್ತು ತಂಗದುರೈ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಖ್ಯಾತ ಗಾಯಕ ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. 2024ರ ಜನವರಿಯಲ್ಲಿ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.