ನವದೆಹಲಿ:ಭಾರತೀಯ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ 2022 (IFFM)ಗೆ ಗೌರವ ಅತಿಥಿಯಾಗಿ ಆಹ್ವಾನಿಸಲಾಗಿದೆ. ವಿಕ್ಟೋರಿಯನ್ ರಾಜಧಾನಿಯಲ್ಲಿ ನಡೆಯಲಿರುವ ಈ ಉತ್ಸವವು ಆಗಸ್ಟ್ 12-20 ರವರೆಗೆ ನಡೆಯಲಿದೆ. ಇತ್ತೀಚೆಗೆ ತೆರೆಕಂಡ ಕಬೀರ್ ಖಾನ್ ನಿರ್ದೇಶನದ '83' ಚಿತ್ರದ ಸಂಭ್ರಮವನ್ನು ಅವರು ಅಲ್ಲಿ ಹಂಚಿಕೊಳ್ಳಲಿದ್ದಾರೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ಬಯೋಪಿಕ್ ಇದಾಗಿದ್ದು, ಚಿತ್ರದಲ್ಲಿ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದರು.
ಕಾರ್ಯಕ್ರಮದ ಭಾಗವಾಗಲು ಉತ್ಸುಕರಾಗಿರುವ ದೇವ್, "ನಾನು IFFM 2022 ರ ಭಾಗವಾಗಲು ಎದುರು ನೋಡುತ್ತಿದ್ದೇನೆ. ಇದು ಭಾರತೀಯ ಸಿನಿಮಾಗಳನ್ನು ಪರಿಚಯಿಸುವ ಉತ್ತಮ ವೇದಿಕೆಗಳಲ್ಲಿ ಒಂದು. ಕ್ರೀಡೆ ಮತ್ತು ಸಿನಿಮಾ ಇವುಗಳು ಭಾರತೀಯರಿಗೆ ಅಷ್ಟೇ ಅಲ್ಲದೇ ವಿವಿಧ ಸಮುದಾಯ ಹಾಗೂ ದೇಶಗಳಿಗೆ ಪ್ರಮುಖ ಸಾಂಸ್ಕೃತಿಕ ಅನುಭವಗಳಾಗಿವೆ.
ಇದೇ ರೀತಿ ದಶಕಗಳಿಂದ ಜನರನ್ನು ಒಗ್ಗೂಡಿಸಿಕೊಂಡು ಬಂದಿರುವ ಸಂಗತಿಯಾಗಿದೆ. ಸಿನಿಮಾ ಮತ್ತು ಕ್ರೀಡೆ ಎರಡರಲ್ಲೂ ನಾವು ಆಳವಾದ ಪ್ರೀತಿ ಮತ್ತು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಹಾಗಾಗಿ ನಮ್ಮ ಪ್ರೀತಿ ಹಂಚಿಕೊಳ್ಳಲು ಇದೊಂದು ಲಾಭದಾಯಕ ವೇದಿಕೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.