ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13ರಂದು ಮತೆ ಎಣಿಕೆ ನಡೆಯಲಿದೆ. ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದು ಕಾಂತಾರ ಖ್ಯಾತಿಯ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸಮಸ್ತ ಜನತೆಯಲ್ಲಿ ಕೇಳಿಕೊಂಡಿದ್ದರು. ಇದೀಗ ಅವರ ರಾಜಕೀಯ ಎಂಟ್ರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ನಡೆಯುತ್ತಿದೆ.
ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಡಿವೈನ್ ಸ್ಟಾರ್?: ಕಾಂತಾರ ಎಂಬ ಯಶಸ್ವಿ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿರುವ ಕನ್ನಡದ ನಟ ಇದೀಗ ಕಾಂತಾರ 2 ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಥೆ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಡಿವೈನ್ ಸ್ಟಾರ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದ್ರೆ ಇದನ್ನು ನಟ ರಿಷಬ್ ಶೆಟ್ಟಿ ಅಲ್ಲಗಳೆದಿದ್ದಾರೆ.
ರಿಷಬ್ ರಾಜಕೀಯಕ್ಕೆ ಎಂಟ್ರಿ #April 1st: ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, 'ರಿಷಬ್ ರಾಜಕೀಯಕ್ಕೆ ಎಂಟ್ರಿ, ಇವತ್ತಿನ ಸುದ್ದಿ, ರಿಷಬ್ ಶೆಟ್ಟಿ, April 1st' ಎಂದು ಟ್ವೀಟ್ ಮಾಡಿದ್ದರು. ಕೆಲ ಹೊತ್ತು ಈ ಟ್ವೀಟ್ ಭಾರೀ ಸಂಚಲನ ಸೃಷ್ಟಿಸಿತ್ತು. ನಿಜವಾಗಿಯೂ ರಿಷಬ್ ಅವರು ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡುತ್ತಾರಾ? ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ? ಎಂಬ ಪ್ರಶ್ನೆಗಳು ಜೋರಾಗಿಯೇ ಕೇಳಿಬಂದಿತ್ತು .
ರಿಷಬ್ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು: ಆ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಾಂತಾರ ಸ್ಟಾರ್, 'ಸುಮ್ನನೆ ಇರಿ ಮಾರ್ರೆ, ಸುಳ್ಳು ಸುದ್ದಿ #April 1st ಹೀಗೆ ಹೇಳಿ, ಮೊದಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿದ್ದಾರೆ, ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.