ಬಹುಬೇಡಿಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಪ್ರಿಯರು ಮಾತ್ರವಲ್ಲದೇ ಚಿತ್ರರಂಗದ ಸೂಪರ್ ಸ್ಟಾರ್ಗಳು ಸಹ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ.
ಈ ಸಿನಿಮಾ ಇತರೆ ಭಾಷೆಗಳಿಗೂ ಡಬ್ಬಿಂಗ್ ಆಗಬೇಕೆಂಬ ಬೇಡಿಕೆ ಬಂದ ಹಿನ್ನೆಲೆ ಪ್ಯಾನ್ ಇಂಡಿಯಾ ಚಿತ್ರವಾಗಿಸಲು ಕಾಂತಾರ ಚಿತ್ರತಂಡ ಮುಂದಾಗಿದೆ. ಅದರ ಮೊದಲ ಹೆಜ್ಜೆಯಂತೆ ಇಂದು ಬೆಳಗ್ಗೆ 9.10ಕ್ಕೆ ಕಾಂತಾರ ತೆಲುಗು ಮತ್ತು ಹಿಂದಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್ 14 ರಿಂದ ಹಿಂದಿ ಮತ್ತು ಅಕ್ಟೋಬರ್ 15 ರಿಂದ ತೆಲುಗು ಅವತರಣಿಕೆಯಲ್ಲಿ ಕಾಂತಾರಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ಈ ಮೂಲಕ ಚಿತ್ರವನ್ನು ತಮ್ಮ ಭಾಷೆಯಲ್ಲಿ ನೋಡಬೇಕೆಂದವರಿಗೆ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ.
ತಮಿಳು, ಮಲೆಯಾಳಂ ಭಾಷೆಗಳಲ್ಲೂ ಸಿನಿಮಾ ಮಾಡಲಾಗುವುದು ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಸದ್ಯದಲ್ಲೇ ತಮಿಳು, ಮಲೆಯಾಳಂ ಭಾಷೆಯ ಕಾಂತಾರ ಟ್ರೈಲರ್ ರಿಲೀಸ್ ಆಗಲಿದೆ. ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರು ಕಾಂತಾರ ಸಿನಿಮಾವನ್ನು ಮಲಯಾಳಂ ಭಾಷೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಈಗಾಗಲೇ ಕಂಬಳ, ದೈವಗಳು ಸೇರಿದಂತೆ ಹಲವು ವಿಶೇಷಗಳಿಂದ 'ಕಾಂತಾರ' ಮನೆಮಾತಾಗಿದೆ. ಬಹುತೇಕ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿರುವ 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ವಿಜಯಪ್ರಕಾಶ್, ಅನನ್ಯ ಭಟ್ ಅವರ ಸಂಗೀತ ಪ್ರೇಕ್ಷಕರ ಮನಮುಟ್ಟಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:ಇಶಾನ್ - ಆಶಿಕಾ ಜೋಡಿಯ ರೇಮೊ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್