'ಕಾಂತಾರ' 2022ರ ಸೂಪರ್ ಹಿಟ್ ಸಿನಿಮಾ. ಮೊದಲು ಕನ್ನಡದಲ್ಲಿ ತೆರೆಕಂಡು ಬಳಿಕ ಕೇವಲ 15-20 ದಿನಗಳಲ್ಲಿ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಅಂದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ ಆಗಿ ದೇಶ ವಿದೇಶಗಳ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಚಿತ್ರವಿದು. 2022ರ ಸೆಪ್ಟೆಂಬರ್ 30 ರಂದು ರಿಲೀಸ್ ಆದ ಕಾಂತಾರ ಸಿನಿಮಾ ಜನವರಿ 7ರಂದು 100 ದಿನವನ್ನು ಪೂರೈಸಿರುವ ಖುಷಿಯಲ್ಲಿದೆ. ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಕಾಂತಾರ ಮತ್ತೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ಮುನ್ಸೂಚನೆ ಕೊಟ್ಟಿದೆ.
ಆಸ್ಕರ್ ಅರ್ಹತೆ:ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ನಟ ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಆಸ್ಕರ್ ರೇಸ್ಗೆ ಪದಾರ್ಪಣೆ ಮಾಡಿದೆ. ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರಾ ಅರ್ಹತೆಯ ಸುತ್ತನ್ನು ಪಾಸ್ ಮಾಡಿದೆ. ಸದ್ಯ 301 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್ ಮಾಡಿವೆ. ಈ ಪೈಕಿ ನಮ್ಮ ಕಾಂತಾರ ಕೂಡ ಒಂದು. ಈ ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮೂಲಕ ಶುಭ ಸುದ್ದಿಯನ್ನು ಹಂಚಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಟ್ವೀಟ್:''ಕಾಂತಾರ ಚಿತ್ರಕ್ಕೆ 2 ಆಸ್ಕರ್ ಅರ್ಹತೆ ಸಿಕ್ಕಿದೆ ಎಂಬ ವಿಚಾರವನ್ನು ಹಂಚಿಕೊಳ್ಳಲು ನಮಗೆ ಬಹಳ ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಚಿತ್ರತಂಡ ಮತ್ತಷ್ಟು ಹೊಳೆಯುವುದನ್ನು ನೋಡಲು ಕಾಯಲು ಸಾಧ್ಯವಿಲ್ಲ'' ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ನಟ ರಿಷಬ್ ಶೆಟ್ಟಿ ಕೂಡ ಟ್ವೀಟ್ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾ:ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಕಾಂತಾರ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯ ವೈಭವೀಕರಣವಾಗಿದೆ. ಕಂಬಳ, ಭೂತ-ಕೋಲ ಸೇರಿದಂತೆ ಹಳ್ಳಿ ವಿಚಾರಗಳ ಬಗ್ಗೆ ಹೇಳಲಾಗಿದೆ. ಮಾನವ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕಥೆಯೇ ಕಾಂತಾರ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅತ್ಯದ್ಭುತವಾಗಿ ಅಭಿನಯಿಸಿರುವುದಲ್ಲದೇ ಅಮೋಘವಾಗಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕ್ಲೈಮ್ಯಾಕ್ಸ್ ಸೀನ್ ಇಡೀ ಚಿತ್ರದ ಹೈಲೆಟ್. ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕಿಶೋರ್ ಸೇರಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರ ಉತ್ತಮ ವಿಮರ್ಶೆ ಗಳಿಸಿರುವ ಜೊತೆಗೆ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಲವು ದಾಖಲೆಗಳನ್ನು ಬರೆದಿರುವ ಕಾಂತಾರ ಇದೀಗ ಆಸ್ಕರ್ ರೇಸ್ಗೆ ಎಂಟ್ರಿಯಾಗಿರುವುದು ಖುಷಿಯ ವಿಚಾರ.