ಭಾರತ ಚಿತ್ರರಂಗಕ್ಕೆ ಕೆಜಿಎಫ್ ಎಂಬ ಅತ್ಯುತ್ತಮ ಚಿತ್ರ ನೀಡಿರುವ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಚಿತ್ರ ಸದ್ಯ ಟಾಕ್ ಆಫ್ ದ ನ್ಯೂಸ್. ಹಾಡು, ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸುದ್ದಿಯಾಗಿರುವ ಕಾಂತಾರ ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಕಥೆಯಲ್ಲಿ ಕಂಬಳ ಇರಲಿಲ್ಲ. ಕಥೆಯನ್ನು ಡೆವಲಪ್ ಮಾಡುವ ವೇಳೆ ಕಂಬಳ ಎನ್ನೋ ಪ್ರಮುಖ ಅಂಶ ಸೇರಿಕೊಂಡಿತು. ಬೈಂದೂರಿಗೆ ಭೇಟಿ ನೀಡಿದಾಗ ಕೋಣ ಓಡಿಸುತ್ತೇನೆ ಎಂದು ರಿಷಬ್ ಶೆಟ್ಟಿ ವಿಷಯ ಆರಂಭಿಸಿದರು. ಅವರಿಂದ ಈ ಕೆಲಸ ಆಗುತ್ತೋ ಇಲ್ಲವೋ ಎಂಬ ಸಂಶಯ ಸಹಜವಾಗಿ ಚಿತ್ರತಂಡ ಮತ್ತು ಸ್ಥಳೀಯರಿಗೆ ಇತ್ತು. ಕಂಬಳದ ನಿಪುಣರಲ್ಲಿ ಮಾಹಿತಿ ಪಡೆದ ರಿಷಬ್ ಕಂಬಳವನ್ನು ಒಮ್ಮೆ ನೋಡಿ ಕಣ್ತುಂಬಿಕೊಂಡರು. ಕೋಣ ಹಿಡಿಯಲು ಮೊದಲು ಹೋದ ಸ್ಥಳೀಯರು ಕೂಡ ಬಿದ್ದು ಎದ್ದರು. ಬಳಿಕ ಕೋಣಗಳ ಬಳಿ ತೆರಳಿದ ರಿಷಬ್ ಶೆಟ್ಟಿ ಅವರಿಗೆ ಸಹಜವಾಗಿ ಭಯ ಇದ್ದರೂ ತೋರಿಸಿಕೊಂಡಿರಲಿಲ್ಲ.
ಮೊದಲ ಬಾರಿ ಬಿದ್ದರೂ ಪ್ರಯತ್ನ ಕೈ ಬಿಡಲಿಲ್ಲ. ಬಳಿಕ ದಿನದಲ್ಲಿ 30-35 ಬಾರಿ ಕಂಬಳ ಓಡಿಸಿ ಯಶಸ್ವಿಯಾಗಿದ್ದಾರೆ. ಪ್ರತೀ ಆ್ಯಂಗಲ್ಗಳಲ್ಲೂ ದೃಶ್ಯ ಸೆರೆಹಿಡಿಯಲು ಸುಮಾರು 30-35 ಕಂಬಳ ಗದ್ದೆಗೆ ಇಳಿದಿದ್ದಾರೆ. ಸಾಂಪ್ರದಾಯಿಕ ಕಂಬಳ ಓಡಿಸುವವರಿಗಿಂತಲೂ ಅತ್ಯುತ್ತಮವಾಗಿ ರಿಷಬ್ ಶೆಟ್ಟಿ ಕೋಣ ಓಡಿಸಿದ್ದಾರೆಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ಹಾಗು ನಟ ರಿಷಬ್ ಶೆಟ್ಟಿ ಮತ್ತು ಈ ಸಿನಿಮಾಕ್ಕೆ ಕ್ಯಾಮರಮ್ಯಾನ್ ಆಗಿ ಕೆಲಸ ಮಾಡಿರೋ ಅರವಿಂದ್ ಕಶ್ಯಪ್ ಕೋಣಗಳ ಜೊತೆ ಕಂಬಳ ಕ್ರೀಡೆ ಶೂಟಿಂಗ್ ಮಾಡಿದ ರೋಚಕ ಕ್ಷಣಗಳನ್ನು ಹಂಚಿಕೊಂಡರು.