ಕರಾವಳಿ ಜನರ ಶ್ರೇಷ್ಠ ನಂಬಿಕೆ ಭೂತಾರಾಧನೆಯನ್ನೇ ಕಥೆಯಾಗಿಸಿ 'ಕಾಂತಾರ' ಸಿನಿಮಾ ಮಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ಕಡಲ ತೀರದ ಬಹುಜನರ ಭಾಷೆ ತುಳುವಿನಲ್ಲಿಯೂ ಚಿತ್ರ ತೆರೆಗೆ ತಂದಿದ್ದಾರೆ. ಈ ಮೂಲಕ ರಿಷಬ್ ಶೆಟ್ಟಿ ಅವರ ಮೊದಲ ತುಳು ಸಿನಿಮಾ ಕೂಡಾ ಇದಾಗಿದೆ.
ಅಂದಾಜು 400 ಕೋಟಿ ರೂ ಗಳಿಸಿ ದೇಶ-ವಿದೇಶದಲ್ಲೂ ಕಾಂತಾರ ಸಂಚಲನ ಸೃಷ್ಟಿಸಿದೆ. ಸ್ಥಳೀಯ ವಸ್ತು, ವಿಷಯಾಧರಿಸಿ ಚಿತ್ರ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಹುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರಗಜ್ಜ, ಕರಗ ಹೀಗೆ ದೇಸಿ ಆಚರಣೆಗಳ ಮೇಲೆ ಸಿನಿಮಾ ನಿರ್ಮಾಣಕ್ಕೂ ಕಾಂತಾರ ದೊಡ್ಡ ಪ್ರೇರಣೆ ನೀಡಿದೆ.
ಎಲ್ಲೆಲ್ಲಿ ತುಳು ಕಾಂತಾರ ನೋಡಬಹುದು?:ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನ ಥಿಯೇಟರುಗಳಲ್ಲಿ ತುಳು ಕಾಂತಾರ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಓಟಿಟಿಯಲ್ಲಿ ಕಾಂತಾರ ಬಿಡುಗಡೆಯಾದರೂ ಥಿಯೇಟರ್ ಕ್ರೇಜ್ ಹಾಗೆಯೇ ಇದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಕನ್ನಡದಲ್ಲಿ ಬಿಡುಗಡೆ ಮಾಡಿದಾಗ ತುಳುನಾಡಿನವರು ತಮ್ಮ ಭಾಷೆಯಲ್ಲೂ ಸಿನಿಮಾ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ತುಳುವಿನಲ್ಲೂ ಸಿನಿಮಾ ಬಿಡುಗಡೆ ಮಾಡಿದ್ದೇವೆ ಎಂದು ರಿಷಬ್ ಹೇಳಿದ್ದಾರೆ.
ಚಿತ್ರವನ್ನು ದೈವಾರಾಧಕರು, ದೈವ ನರ್ತಕರು, ದೈವಕ್ಕೆ ಸೇವೆ ನೀಡಿರುವ ಕುಟುಂಬದವರಿಗೆ ಹಾಗೂ ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸುತ್ತಿದ್ದೇವೆ. ಸಿನಿಮಾ ನೋಡಿ, ಬೇರೆ ಬೇರೆ ರೀತಿ ವಿಡಿಯೋ ಅಥವಾ ಅಣಕು ಪ್ರದರ್ಶನ ಮಾಡಿ, ದೈವಾರಾಧಕರು ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ.
'ಇದು ದೈವ ಕೊಟ್ಟ ಗೆಲುವು': ದೈವ ಹೆಚ್ಚಾ ಸಿನಿಮಾ ಹೆಚ್ಚಾ ಎಂದು ಕೇಳಿದವರಿದ್ದಾರೆ. ಅವರಿಗೆ ನಾನು ಹೇಳುವುದು ಒಂದೇ ದೈವವೇ ಹೆಚ್ಚು. ನಾನು ಈ ಗೆಲುವನ್ನು ದೈವವೇ ಕೊಟ್ಟಿದೆ ಎಂದು ನಂಬಿಕೊಂಡವನು. ಹೀಗಾಗಿ ದೇವರ ಅಣಕು ಮಾಡಿ ಆರಾಧಕರಿಗೆ ನೋವುಂಟುಮಾಡಬೇಡಿ ಅನ್ನೋದು ರಿಷಬ್ ಶೆಟ್ಟಿ ಮನವಿ.
ಇದನ್ನೂ ಓದಿ:'ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ' - ರಿಷಬ್ ಶೆಟ್ಟಿ