ತಿರುವಂತನಪುರಂ (ಕ್ಯಾಲಿಕಟ್): 'ಕಾಂತಾರ' ಚಿತ್ರದ 'ವರಾಹರೂಪಂ' ಹಾಡಿನ ಹಕ್ಕುಸ್ವಾಮ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕರೂ ಆದ ನಟ ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಹಾಜರಾಗಿದ್ದರು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ. ಇಬ್ಬರಿಗೂ ಫೆಬ್ರವರಿ 13 ರಂದು ಕ್ಯಾಲಿಕಟ್ ಟೌನ್ ಪೊಲೀಸ್ ಠಾಣೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಹಾಜರಾಗಿದ್ದರು. ನಿನ್ನೆ ಕೂಡ ಇಬ್ಬರೂ ಠಾಣೆಗೆ ಹಾಜರಾಗಿದ್ದರು. ಆದರೆ, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿರಲಿಲ್ಲ. ಹಾಗಾಗಿ ಇಂದು ಅವರ ಹೇಳಿಕೆ ದಾಖಲಿಸಿಕೊಳ್ಳಲು ತನಿಖಾ ತಂಡ ಕರೆಸಿಕೊಂಡಿತ್ತು. ಸದ್ಯ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಹಕ್ಕುಸ್ವಾಮ್ಯದ ಸಂಬಂಧಿತ ದಾಖಲೆಗಳನ್ನು ಒದಗಿಸುವಂತೆ ತೈಕುಡಂ ಬ್ರಿಡ್ಜ್, ಮ್ಯೂಸಿಕ್ ಬ್ಯಾಂಡ್ ಮತ್ತು ಕಾಂತಾರ ಚಿತ್ರಕ್ಕೆ ನಿರ್ದೇಶಿಸಲಾಗಿದೆ. ದೂರಿನಂತೆ ಕಾನೂನು ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಮತ್ತೆ ಅವರನ್ನು ಮತ್ತೆ ಕರೆಸಿ ವಿಚಾರಣೆ ಮಾಡಲಾಗುವುದು ಎಂದು ಪಟ್ಟಣ ಡಿಸಿಪಿ ಕೆ.ಇ.ಬೈಜು ತಿಳಿಸಿದ್ದಾರೆ.
ಆರೋಪ ಏನು?:ಕಾಂತಾರ ಚಿತ್ರದ ‘ವರಾಹರೂಪಂ’ ಹಾಡು ತೈಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಸಂಯೋಜಿಸಿರುವ ‘ನವರಸಂ’ ಹಾಡಿನ ಅನಕೃತ ನಕಲು ಎಂದು ಆರೋಪ ಮಾಡಲಾಗಿತ್ತು. ಅಲ್ಲದೇ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದೆ ಎಂದು 'ನವರಸಂ' ಹಾಡಿನ ಮಾಲೀಕರಾದ ತೈಕುಡಂ ಬ್ರಿಡ್ಜ್ ಮತ್ತು ಮಾತೃಭೂಮಿ ಸಂಸ್ಥೆ ಕಾಂತಾರ ನಿರ್ಮಾಪಕ ಮತ್ತು ನಿರ್ದೇಶಕರ ವಿರುದ್ಧ ಕ್ಯಾಲಿಕಟ್ ಟೌನ್ ಪೊಲೀಸರಿಗೆ ದೂರು ನೀಡಿತ್ತು.
ಈ ಹಿಂದೆ ‘ವರಾಹರೂಪಂ’ ಹಾಡನ್ನು ನಿಷೇಧಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಅಂತಹ ಸೂಚನೆಗಳು ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನು ಆದೇಶದಲ್ಲಿ ತಿಳಿಸಿತ್ತು. ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ಹಣ ಗಳಿಕೆಯ ಜೊತೆಗೆ ಜನಪ್ರಿಯತೆಯನ್ನು ಗಳಿಸಿಕೊಂಡಿತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆ ಕಂಡಿದೆ.
'ಕಾಂತಾರ ಚಿತ್ರದ ಯಶಸ್ವಿಗೆ ಎಲ್ಲರಿಗೂ ಧನ್ಯವಾದ. ಕೋರ್ಟ್ ನಿರ್ದೇಶನದಂತೆ ನಮ್ಮನ್ನು ಕರೆದಿದ್ದರು. ಹಾಗಾಗಿ ಹಾಜರಾಗಿದ್ದೆವು. ಪೊಲೀಸ್ ಅಧಿಕಾರಿಗಳು ನಮ್ಮನ್ನು ಚನ್ನಾಗಿ ನೋಡಿಕೊಂಡಿದ್ದಾರೆ. ಹಾಗಾಗಿ ಅವರಿಗೂ ಧನ್ಯವಾದಗಳು. ಇದು ಒರಿಜನಲ್ ಹಾಡು. ಹಾಗಾಗಿ ಪ್ರಕರಣ ನ್ಯಾಯಾಲದಲ್ಲಿರುವುದರಿಂದ ನಾವು ತೀರ್ಪುಗಾಗಿ ಕಾಯುತ್ತೇವೆ'. ರಿಷಬ್ ಶೆಟ್ಟಿ, ನಟ
ಇದನ್ನೂ ಓದಿ:ಚಂದನವನದ ಸ್ಟಾರ್ಗಳ ಜೊತೆ ಪ್ರಧಾನಿ ಮಾತುಕತೆ: ಭಾರತೀಯ ಚಿತ್ರರಂಗಕ್ಕಾಗಿ ಮೋದಿಗೆ ಮನವಿ ಸಲ್ಲಿಸಿದ ನಟ ಯಶ್