'ಕಾಂತಾರ' ಚಿತ್ರದ ಭಾರಿ ಯಶಸ್ಸಿನ ನಂತರ, ಬಹುನಿರೀಕ್ಷಿತ ಚಿತ್ರ 'ಕಾಂತಾರ ಒಂದು ದಂತಕಥೆ ಅಧ್ಯಾಯ-1'ರ ಫಸ್ಟ್ ಲುಕ್ ಪೋಸ್ಟರ್ ಹಾಗು ಟೀಸರ್ ಅನಾವರಣಗೊಂಡಿದೆ. ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇನ್ಸ್ಟಾಗ್ರಾಮ್ನಲ್ಲಿ ರಿಲೀಸ್ ಮಾಡಿರುವ ರಿಷಬ್ ಶೆಟ್ಟಿ ಅಭಿನಯಮದ ಮೊದಲ ಲುಕ್ಗೆ ಅಭಿಮಾನಿಗಳಿಗೆ ಫುಲ್ ಫಿದಾ ಆಗಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ 7 ಭಾಷೆಗಳಲ್ಲಿ ತೆರೆಕಾಣಲಿರುವ ಕಾಂತಾರ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿದೆ. "ದೈವಿಕ ಭೂಮಿಗೆ ಹೆಜ್ಜೆ ಹಾಕಿ" ಎಂದು ಬರೆಯಲಾಗಿದೆ. ಟೀಸರ್ ಹಾಗೂ ಫಸ್ಟ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ಆಕರ್ಷಕ ಪಾತ್ರದ ಝಲಕ್ ನೋಡಬಹುದು. 'ಕಾಂತಾರ ಅಧ್ಯಾಯ 1' ಸಿನಿಮಾ ಬಿಡುಗಡೆಯಾಗುವ ವಿವಿಧ ಭಾಷೆಗಳನ್ನು ಪ್ರತಿನಿಧಿಸುವ ಸಂಗೀತದೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ.
ಪೋಸ್ಟರ್‌ನಲ್ಲಿ ರಿಷಬ್ ರೌದ್ರಾವತಾರದಲ್ಲಿ ದಿಟ್ಟಿಸಿ ನೋಡುತ್ತಿದ್ದಾರೆ. ಧೋತಿ ಧರಿಸಿರುವ ಅವರು, ಆವೇಷಭರಿತ ಭಂಗಿಯಲ್ಲಿ ನಿಂತಿದ್ದಾರೆ. ಕೈಯಲ್ಲಿ ರಕ್ತದಿಂದ ಮುಳುಗಿದ ತ್ರಿಶೂಲ ಮತ್ತು ಕೊಡಲಿ ಹಿಡಿದು ದುಷ್ಟರ ಸಂಹಾರದಲ್ಲಿ ತೊಡಗಿರುವಂಥ ದೃಶ್ಯವಿದೆ. ಕಾಂತಾರ 2ಗೆ ಅಧಿಕೃತವಾಗಿ 'ಕಾಂತಾರ ಅಧ್ಯಾಯ 1' ಎಂದು ಶೀರ್ಷಿಕೆ ನೀಡಲಾಗಿದೆ ಎಂಬುದು ಬಹಿರಂಗವಾಗಿದೆ.
ಟೀಸರ್‌ಗೆ 9 ಮಿಲಿಯನ್ಗೂ ಹೆಚ್ಚು ವೀಕ್ಷಣೆ:ಸಿನಿಮಾದ ಟೀಸರ್ ಒಂದೇ ದಿನದಲ್ಲಿ ಯೂಟ್ಯೂಬ್ ಮೂಲಕ 9 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಗಿಟ್ಟಿಸಿದೆ. ಈ ಚಿತ್ರ ಕೆಜಿಎಫ್, ಬಾಹುಬಲಿ, ಜವಾನ್ ಹಿಂದಿಕ್ಕಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.