ರಿಷಬ್ ಶೆಟ್ಟಿ ಸ್ವ ನಿರ್ದೇಶನದ ಸಿನಿಮಾ 'ಕಾಂತಾರ ಚಾಪ್ಟರ್-1'. ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಚಿತ್ರ ಇದಾಗಿದೆ. ‘ಕಾಂತಾರ’ ಸಿನಿಮಾದ ಮೊದಲ ಭಾಗದಲ್ಲಿ ನೋಡಿದ ಕಥೆ ಮೊದಲು ಏನಾಯ್ತು? ಎಂಬುದನ್ನು ಈ 'ಕಾಂತಾರ ಚಾಪ್ಟರ್ 1'ರಲ್ಲಿ ತೋರಿಸಲಾಗುವುದು. ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಮೊದಲೇ ಘೋಷಿಸಿದಂತೆ ಸೋಮವಾರ (ನವೆಂಬರ್ 27) ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ವಿಶೇಷ ಎಂದರೆ ಈ ಫಸ್ಟ್ ಲುಕ್ನಲ್ಲಿ ‘‘During the reign of KADAMBAS -A legend was born‘‘ ಶೀರ್ಷಿಕೆ ನೀಡಿರುವುದು ಭಾರಿ ಗಮನ ಸೆಳೆದಿದೆ. ಕದಂಬರ ಆಳ್ವಿಕೆಯಲ್ಲಿ ಹುಟ್ಟಿದ ಒಂದು ದಂತ ಕಥೆ ಎಂದು ಟೀಸರ್ನಲ್ಲಿ ಹೇಳಲಾಗಿದೆ.
''ಕಾಂತಾರ'' ವಿಶೇಷ ಪರಿಚಯ ಬೇಕೆನಿಸದು. ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದ ಸಿನಿಮಾವಿದು. ಸಿನಿಪ್ರಿಯರು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಖ್ಯಾತನಾಮರು ಸಹ ಮೆಚ್ಚಿ ಕೊಂಡಾಡಿದ ಅದ್ಭುತ ಚಿತ್ರ. ಅಪಾರ ಸಂಖ್ಯೆಯ ಪ್ರೇಕ್ಷಕರ ಮನಗೆದ್ದಿರುವ ಕಾಂತಾರದ ಮತ್ತೊಂದು ಭಾಗ ನಿರ್ಮಾಣಗೊಳ್ಳುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ. ಇದೀಗ ಕಾಂತಾರ ಪ್ರೀಕ್ವೆಲ್‌ನ ಟೀಸರ್ ಅನಾವರಣಗೊಂಡಿದೆ.
ನಟ ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ ಕಾಂತಾರ 2022ರ ಹಿಟ್ ಚಲನಚಿತ್ರವಾಗಿ ಹೊರಹೊಮ್ಮಿತ್ತು. ಸದ್ಯ ನಿರ್ಮಾಣಗೊಳ್ಳುತ್ತಿರುವುದು ಸೀಕ್ವೆಲ್ ಅಲ್ಲ, ಬದಲಾಗಿ ಪ್ರೀಕ್ವೆಲ್. ಕಾಂತಾರ ಚಾಪ್ಟರ್ 1 ನಿರ್ದೇಶನ ಸಾಹಸಕ್ಕೆ ಚಿತ್ರತಂಡ ಸಜ್ಜಾಗಿದೆ. ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ನೀಡಲು ರಿಷಬ್ ಶೆಟ್ಟಿ ತಂಡ ಸಂಪೂರ್ಣ ಪರಿಶ್ರಮ ಹಾಕುತ್ತಿದೆ. ಕಾಂತಾರ ಪ್ರೀಕ್ವೆಲ್‌ನ ಮೊದಲ ನೋಟ ಯಾವಾಗ ಅನಾವರಣಗೊಳ್ಳಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದರು. ಅಂತಿಮವಾಗಿ ಆ ಕಾತರಕ್ಕೆ ತೆರೆ ಬಿದ್ದಿದೆ.
ಈ ಹಿಂದೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಶೇರ್ ಮಾಡಿದ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ''ಇದು ಬರಿ ಬೆಳಕಲ್ಲ, ದರ್ಶನ'' ಕಾಂತಾರ ಪ್ರೀಕ್ವೆಲ್ ಫಸ್ಟ್ ಲುಕ್ ನವೆಂಬರ್ 27ರ ಮಧ್ಯಾಹ್ನ 12:25ಕ್ಕೆ ಬಿಡುಗಡೆ ಎಂದು ಬರೆದುಕೊಂಡಿದ್ದರು.
''ಕಾಂತಾರ ಚಾಪ್ಟರ್ 1'' ಎಂದು ಹೆಸರಿಸಲಾಗಿರುವ ಪ್ರೀಕ್ವೆಲ್‌ನ ಫಸ್ಟ್ ಲುಕ್ ಅನ್ನು ಚಿತ್ರತಂಡ ಇಂದು ಅನಾವರಣಗೊಳಿಸಿದೆ. ಯಶಸ್ವಿ ಸಿನಿಮಾದ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೂಡ ಈ ಕುತೂಹಲಕಾರಿ ಸಂಗತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ಹಿಂದೆ ಹಂಚಿಕೊಂಡಿತ್ತು. ಈ ಹಿಂದೆ ಪೋಸ್ಟ್ ಶೇರ್ ಮಾಡಿದಾಗ ಹೊಂಬಾಳೆ ಫಿಲ್ಮ್ಸ್, ''ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ'' ಎಂದು ಬರೆದುಕೊಂಡಿತ್ತು.
ಓದಿ:7 ಭಾಷೆಗಳಲ್ಲಿ 'ಕಾಂತಾರ' ದರ್ಶನ: 100 ಕೋಟಿ ಬಜೆಟ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ಗೆ ಕಾತರ