ರಿಷಭ್ ಶೆಟ್ಟಿ ಅಭಿನಯದ ಕಾಂತಾರ ರಿಲೀಸ್ ಆಗಿ 25 ದಿನಗಳಾದ್ರೂ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕನ್ನಡದಲ್ಲಷ್ಟೇ ಅಲ್ಲ, ದೇಶ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಕನ್ನಡದ ಅಪ್ಪಟ ಜನಪದ ಕಥೆಯಾದ ಕಾಂತಾರ ಜನರ ಮನ ಗೆಲ್ಲುವ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಈಗಾಗಲೇ ಹಲವು ದಾಖಲೆ ನಿರ್ಮಿಸಿರುವ ಕಾಂತಾರ ಇದೀಗ ಮತ್ತೊಂದು ಹೊಸ ರೆಕಾರ್ಡ್ ಬರೆದಿದೆ.
ಹೌದು, ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಲ್ಪಟ್ಟ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾ ಪ್ರಿಯರು ಕಾಂತಾರ ವೀಕ್ಷಿಸಿರುವುದು ರಾಜ್ಯದಲ್ಲಿ ಹೊಸ ದಾಖಲೆಯಾಗಿದೆ.
ಕಾಂತಾರ ಚಿತ್ರ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಯೇ ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ. 'ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕ' ಎಂದು ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದೆ.
(ಓದಿ: 'ವಾವ್ ರಿಷಬ್ ಶೆಟ್ಟಿ, ಹ್ಯಾಟ್ಸ್ ಆಫ್! ಸಿನಿಮಾ ಅಂದ್ರೆ ಕಾಂತಾರ)
ರಾಜಕುಮಾರ, ಕೆಜಿಎಫ್ ದಾಖಲೆ ಬ್ರೇಕ್:ಈ ಮುನ್ನ ಹೊಂಬಾಳೆ ನಿರ್ಮಿಸಿದ್ದ ರಾಜಕುಮಾರ, ಕೆಜಿಎಫ್ ಚಾಪ್ಟರ್ 1, 2 ಚಿತ್ರಗಳು ರಾಜ್ಯದಲ್ಲಿ ದಾಖಲೆ ಬರೆದಿದ್ದವು. 2017 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿ, ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದ ರಾಜಕುಮಾರ ಚಿತ್ರವನ್ನು 65 ಲಕ್ಷ ಜನರು ವೀಕ್ಷಿಸಿದ್ದರು. 2018 ರಲ್ಲಿ ಹೊಂಬಾಳೆ ನಿರ್ಮಿಸಿದ ಮತ್ತೊಂದು ಸೂಪರ್ ಹಿಟ್ ಚಿತ್ರ ಕೆಜಿಎಫ್ 1 ಬಿಡುಗಡೆಯಾಯಿತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ದೇಶದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತ್ತು. ಈ ಚಿತ್ರವನ್ನು ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿ ಮತ್ತೊಂದು ದಾಖಲೆ ನಿರ್ಮಿಸಿತ್ತು. ಆ ಮೂಲಕ ಹೊಂಬಾಳೆ ಬ್ಯಾನರ್ನ ಹಿಂದಿನ ದಾಖಲೆಯನ್ನು ‘ಕೆಜಿಎಫ್ 1 ‘ ಬ್ರೇಕ್ ಮಾಡಿತ್ತು.