ಕರ್ನಾಟಕ

karnataka

ETV Bharat / entertainment

ಅಣ್ಣಾವ್ರ ಸಿನಿಮಾ ನೋಡಿ ಹೀರೋ ಆದ ಕುಂದಾಪುರದ ಹುಡುಗ - ರಿಷಬ್ ಶೆಟ್ಟಿ ಸಿನಿಪಯಣ ಸಖತ್​ ಇಂಟ್ರೆಸ್ಟ್ರಿಂಗ್! - Rishab Shetty birthday celebration

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಇಂದು ಅಭಿಮಾನಿಗಳೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.

Rishab Shetty cine journey
ರಿಷಬ್ ಶೆಟ್ಟಿ ಸಿನಿ ಪಯಣ

By

Published : Jul 7, 2023, 1:50 PM IST

ಪ್ರತಿಭೆ, ಶ್ರಮ, ಅದೃಷ್ಟ, ಗುರಿ ಸಾಧಿಸುವ ಛಲ ಇದ್ರೆ ಅದಕ್ಕೆ ತಕ್ಕ ಪ್ರತಿಫಲ ಸಿಗೋದು ಖಚಿತ. ಸ್ಯಾಂಡಲ್​​​ವುಡ್​ನಲ್ಲಿ ಸ್ಟಾರ್ ಡೈರೆಕ್ಟರ್ ಜೊತೆಗೆ ಹೀರೋ ಆಗಿರುವ ರಿಷಬ್ ಶೆಟ್ಟಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 1983ರ ಜುಲೈ 7ರಂದು ಕುಂದಾಪುರದ ಕೆರಾಡಿ ಎಂಬ ಹಳ್ಳಿಯಲ್ಲಿ ರಿಷಬ್ ಶೆಟ್ಟಿ ಜನಿಸುತ್ತಾರೆ‌. ಸದ್ಯ 40ನೇ ವಸಂತಕ್ಕೆ ಕಾಲಿಟ್ಟಿರೋ ರಿಷಬ್ ಶೆಟ್ಟಿ ಸಿನಿಮಾ ಎಂಬ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು ಇಂಟ್ರೆಸ್ಟ್ರಿಂಗ್ ವಿಚಾರ.

ಅಪ್ಪು ಜೊತೆ ರಿಷಬ್ ಶೆಟ್ಟಿ

ನಟನಾಗುವ ಕನಸು:ಬಾಲ್ಯದ ದಿನಗಳಲ್ಲಿ ನಾಟಕ ಹಾಗೂ ಯಕ್ಷಗಾನಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದರು. ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಸಿನಿಮಾದ ಗೀಳು ಅಂಟಿಸಿಕೊಂಡಿದ್ದರು. ಡಾ. ರಾಜ್​ಕುಮಾರ್ ಹಾಗೂ ಶಂಕರ್​ನಾಗ್ ಚಿತ್ರಗಳು ಅಂದರೆ ಈ ನಟನಿಗೆ ಪಂಚಪ್ರಾಣ. ಮುಖ್ಯವಾಗಿ ರಿಷಬ್ ಶೆಟ್ಟಿ ಅವರಿಗೆ ತಾನು ಹೀರೋ ಆಗಬೇಕು ಎಂಬ ಸ್ಫೂರ್ತಿ ಆಗಿದ್ದು ಕನ್ನಡ ಚಿತ್ರರಂಗದ ಮೇರು ನಟನರಾದ ದಿ. ಡಾ. ರಾಜ್​ಕಮಾರ್. ಅವರ ಮನೋಜ್ಞ ಅಭಿನಯ ಹಾಗು ಸಿನಿಮಾಗಳು ಡಿವೈನ್​ ಸ್ಟಾರ್​ ಗಮನ ಸೆಳೆದಿತ್ತು. ಆಗ್ಲೇ ಅಣ್ಣಾವ್ರ ರೀತಿ ನಟನಾಗಬೇಕು ಎಂದು ರಿಷಬ್ ಶೆಟ್ಟಿ ನಿರ್ಧಾರ ಮಾಡಿದ್ರು‌. ಕಾಲೇಜು ವಿದ್ಯಾಭ್ಯಾಸ ವೇಳೆ ಸಿನಿಮಾ ಕ್ರೇಜ್ ಜಾಸ್ತಿ ಮಾಡಿದ್ದು ಉಪೇಂದ್ರ ಅವರ ಸಿನಿಮಾಗಳು.

ಸಿನಿಮಾಗಳಲ್ಲಿ ಕೆಲಸ: ಆಗ ಕುಂದಾಪುರದಿಂದ ರಿಷಬ್ ಶೆಟ್ಟಿ ಬೆಂಗಳೂರಿಗೆ ಬರುತ್ತಾರೆ. ನಿರ್ದೇಶಕ ಎ.ಎಂ.ಆರ್ ರಮೇಶ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಅರವಿಂದ್ ಕೌಶಿಕ್ ನಿರ್ದೇಶನದ ತುಘ್ಲಕ್ ಚಿತ್ರದಲ್ಲಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾ, ಇದೇ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಮಾಡ್ತಾರೆ. ಅಲ್ಲಿಂದ ಲೂಸಿಯಾ ಹಾಗು ಉಳಿದವರು ಕಂಡಂತೆ ಚಿತ್ರಗಳಲ್ಲಿ ನಟಿಸುವ ಮೂಲಕ ರಿಷಬ್ ಶೆಟ್ಟಿ ಗಾಂಧಿನಗರದಲ್ಲಿ ಗಮನ ಸೆಳೆಯುತ್ತಾರೆ.

ರಿಷಬ್ ಶೆಟ್ಟಿ

ಆ್ಯಕ್ಷನ್​ ಕಟ್​ ಹೇಳಿದ ಮೊದಲ ಸಿನಿಮಾ ರಿಕ್ಕಿ: ಈ ಮೂರು ಚಿತ್ರಗಳ ಅನುಭವದಿಂದ ರಿಷಬ್ ಶೆಟ್ಟಿ, 2016ರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಮುಖ್ಯಭೂಮಿಕೆಯ ರಿಕ್ಕಿ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಾರೆ. ಅಂದುಕೊಂಡಂತೆ ರಿಷಬ್ ಶೆಟ್ಟಿ ಅವರಿಗೆ ರಿಕ್ಕಿ ಸಿನಿಮಾ ಒಳ್ಳೆ ಹೆಸರು ತಂದುಕೊಡುತ್ತೆ‌.

ಕಿರಿಕ್ ಪಾರ್ಟಿ ಸಕ್ಸಸ್:ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರಿಗೆ ಸ್ಟಾರ್ ಡೈರೆಕ್ಟರ್ ಪಟ್ಟ ತಂದುಕೊಟ್ಟ ಸಿನಿಮಾ ಕಿರಿಕ್ ಪಾರ್ಟಿ. ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಕಿರಿಕ್ ಪಾರ್ಟಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿತ್ತು.

ಫ್ಯಾಮಿಲಿ ಮ್ಯಾನ್​​: ಬಳಿಕ 2017ರಲ್ಲಿ ಪ್ರೀತಿಸಿದ ಹುಡುಗಿ ಪ್ರಗತಿ ಅವರ ಜೊತೆ ಹಸೆಮಣೆ ಏರುತ್ತಾರೆ‌. ಸದ್ಯ ಇಬ್ಬರು ಮುದ್ದು ಮಕ್ಕಳ ತಂದೆ ಇವರು. ಸಾಮಾಜಿಕ ಜಾಲತಾಣದಲ್ಲಿ ಈ ಕುಟುಂಬದ ಫೋಟೋ, ವಿಡಿಯೋಗಳು ಜಾಗ ಗಿಟ್ಟಿಸಿಕೊಳ್ಳುತ್ತವೆ.

ಸಿನಿಮಾಗಳಲ್ಲಿ ಕೆಲಸ: ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿದ ಸಿನಿಮಾ‌, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು. ಕಡಿಮೆ ಬಜೆಟ್​ನಲ್ಲಿ ಒಂದೊಳ್ಳೆ ಕಥಾಹಂದರವಿರುವ ಸಿ‌ನಿಮಾ‌ ಮಾಡಬಹುದು ಅನ್ನೋದನ್ನು ರಿಷಬ್ ಶೆಟ್ಟಿ ಈ‌ ಚಿತ್ರದಲ್ಲಿ ತೋರಿಸುತ್ತಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ರಿಷಬ್ ಶೆಟ್ಟಿ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಿರ್ದೇಶಕರಾದರು.

ಮೊದಲ ಬಾರಿಗೆ ನಟನೆ: ಈ ಸಿನಿಮಾ ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸುವ ಮೂಲ ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ ರಿಷಬ್ ಶೆಟ್ಟಿ ಅವರಿಗೆ, ಬೆಲ್ ಬಾಟಮ್ ಚಿತ್ರ ಸ್ಟಾರ್ ಪಟ್ಟ ತಂದು ಕೊಡುತ್ತೆ. ಈ ಮಧ್ಯೆ ಹೀರೋ ಅಂತಾ ಸಿನಿಮಾ‌ ಮಾಡ್ತಾರೆ. ‌ಆದ್ರೆ ಅಂದುಕೊಂಡಂತೆ ಯಶಸ್ಸು ತಂದು ಕೊಡಲಿಲ್ಲ.

ಸೂಪರ್​ ಹಿಟ್ ಕಾಂತಾರ:ಈ ಚಿತ್ರದ ಬಳಿಕ ರಿಷಬ್ ಶೆಟ್ಟಿ ಪ್ಯಾನ್‌ ಇಂಡಿಯಾ ಸ್ಟಾರ್ ಆಗುವಂತೆ ಮಾಡಿದ ಬ್ಲಾಕ್​ಬಸ್ಟರ್ ಸಿನಿಮಾ 'ಕಾಂತಾರ'. ಕಾಂತಾರಕ್ಕೂ ಮುನ್ನ ಕೆಲ ಸಿನಿಮಾದಲ್ಲಿ ಕೆಲಸ ಮಾಡಿದ್ದರೂ ದೇಶಾದ್ಯಂತ ದೊಡ್ಡ ಮಟ್ಟಿನ ಖ್ಯಾತಿ ತಂದುಕೊಟ್ಟಿರಲಿಲ್ಲ. ಆದ್ರೆ ನಿರ್ದೇಶನದ ಜೊತೆಗೆ ನಟಿಸಿದ ಕಾಂತಾರ ಸಿನಿಮಾ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಸದ್ದು ಮಾಡಿತು. ಮೂಲೆ ಮೂಲೆಗಳಿಂದಲೂ ಅಭಿಮಾನಿಗಳನ್ನು ಸಂಪಾದಿಸಿದರು. ಈ ಚಿತ್ರದ ಮೂಲಕ ವಿಶ್ವದೆಲ್ಲೆಡೆ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದರು. ಸದ್ಯ ಇಂಡಿಯನ್​ ಸೂಪರ್ ಸ್ಟಾರ್​ಗಳ ಪೈಕಿ ರಿಷಬ್​ ಶೆಟ್ಟಿ ಪ್ರಮುಖರು. ಈ ಹಿನ್ನೆಲೆಯಲ್ಲಿ ಇಂದು ಮೈಸೂರು ರಸ್ತೆಯಲ್ಲಿರೋ ನಂದಿ‌ ಲಿಂಕ್ಸ್ ಗ್ರೌಂಡ್​ನಲ್ಲಿ ಅಭಿಮಾನಿಗಳನ್ನು ಭೇಟಿ‌ ಮಾಡುವುದರ ಜೊತೆಗೆ ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆ‌.

ಇದನ್ನೂ ಓದಿ:Rishab Shetty Birthday: ಅಭಿಮಾನಿಗಳೊಂದಿಗೆ ಇಂದು 'ಕಾಡುಬೆಟ್ಟು ಶಿವ'ನ ಜನ್ಮದಿನ ಡಿವೈನ್​ ಸ್ಟಾರ್ ರಿಷಬ್‌ ಶೆಟ್ಟಿ ಮುಂದಿನ ಸಿನಿಮಾಗಳಿವು..

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸ್ಟಾರ್ ಡಮ್‌ ಸಂಪಾದಿಸಿರೋ ರಿಷಬ್ ಶೆಟ್ಟಿ ‌ಕಾಂತಾರ 2, ನಾಥುರಾಮ್‌, ಕೌಬಾಯ್ ಕೃಷ್ಣ, ಬೆಲೆ ಬಾಟಮ್ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ‌. ಒಟ್ಟಾರೆ ಚಿಕ್ಕವಯಸ್ಸಿನಿಂದಲೂ ಸಿನಿಮಾದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ರಿಷಬ್​ ಶೆಟ್ಟಿ ಅವರು ಅಂದುಕೊಂಡಂತೆ ನಿರ್ದೇಶಕನಾಗುವುದರ ಜೊತೆಗೆ ಸ್ಟಾರ್ ಹೀರೋ ಆಗುವ ಮೂಲಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ‌.

ABOUT THE AUTHOR

...view details