ದಾವಣಗೆರೆ: ಕನ್ನಡ ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳ ಕಾಲ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದವರು ಹಿರಿಯ ನಟಿ ಡಾ. ಲೀಲಾವತಿ. ಅವರ ಅಗಲಿಕೆ ಇಡೀ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ. ಇವರ ಸಿನಿ ಸಾಧನೆ ಎಂದಿಗೂ ಅವಿಸ್ಮರಣೀಯ ಮತ್ತು ಅನೇಕರಿಗೆ ಆದರ್ಶ. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಅಮೋಘ ಪ್ರತಿಭೆಗೂ ದಾವಣಗೆರೆಗೂ 'ತುಂಬಿದ ಕೊಡ'ದ ನಂಟಿದೆ. ಅದೇನು ಅಂತೀರಾ? ಇಲ್ಲಿದೆ ನೋಡಿ.
1964ರಲ್ಲಿ ಬೆಣ್ಣೆ ನಗರಿಯ ಬೀದಿಗಳಲ್ಲಿ ನಡೆದಿದ್ದ ಚಿತ್ರೀಕರಣದಲ್ಲಿ ಡಾ. ರಾಜ್ಕುಮಾರ್ ಅವರೊಂದಿಗೆ ಅಭಿನಯಿಸಿದ್ದ ಲೀಲಾವತಿಯವರ 'ತುಂಬಿದ ಕೊಡ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ದಾವಣಗೆರೆಯಲ್ಲಿ 1964 ಅಂದರೆ, ಸುಮಾರು 59 ವರ್ಷಗಳ ಹಿಂದೆ ನಟಿ ಲೀಲಾವತಿ ಅಭಿನಯಿಸಿದ 'ತುಂಬಿದ ಕೊಡ' ಚಿತ್ರದ ಚಿತ್ರೀಕರಣ ದಾವಣಗೆರೆಯ ಸಾಕಷ್ಟು ಬೀದಿಗಳಲ್ಲಿ ನಡೆದಿತ್ತು. ಲೀಲಾವತಿಯವರು ಈ ಚಿತ್ರದಲ್ಲಿ ಕೇಂದ್ರ ಬಿಂದುವಾಗಿ ನಟಿಸಿದ್ದರು. ಬೆಣ್ಣೆ ನಗರಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಹಿರಿಯ ನಟಿ ಭಾಗವಹಿಸಿದ್ದರು.
ಮೊಟ್ಟಮೊದಲಿಗೆ ದಾವಣಗೆರೆಯಲ್ಲಿ ಚಿತ್ರೀಕರಣ ನಡೆದ 'ತುಂಬಿದ ಕೊಡ' ಸಿನಿಮಾ ಒಟ್ಟು16 ರೀಲ್ಗಳಿಂದ ಕೂಡಿತ್ತು. ಈ ಸಿನಿಮಾವನ್ನು ಎನ್.ಸಿ ರಾಜನ್ ನಿರ್ದೇಶನ ಮಾಡಿದ್ದರು. ವೆಂಕಟೇಶ್ ಫ್ರೆಂಡ್ಸ್ ಈ ಚಿತ್ರವನ್ನು ಸೆರೆ ಹಿಡಿದಿದ್ದರು. ಸಿನಿಮಾ ತೆರೆ ಕಂಡು ಸೂಪರ್ ಹಿಟ್ ಆಗಿತ್ತು. ದಾವಣಗೆರೆಯಲ್ಲಿ ಮಾಡಿದ ಚಿತ್ರೀಕರಣದಲ್ಲಿ ಲೀಲಾವತಿ ಅವರ ನಟನೆ ಅಮೋಘವಾಗಿತ್ತು. ಕಣ್ಣಿನಲ್ಲೇ ಅಭಿನಯ, ಭಾವಾಭಿನಯ, ವಾಚಿಕ ಅಭಿನಯ, ನಗು, ಅಳು, ಕೋಪ ಎಲ್ಲವೂ ಸಾತ್ವಿಕವಾಗಿ ಆಕರ್ಷಣೀಯವಾಗಿತ್ತು.
ಇಲ್ಲಿನ ಜಯಚಾಮರಾಜೇಂದ್ರ ವೃತ್ತದಲ್ಲಿ ಬರುವ ವೇಳೆ ಲೀಲಾವತಿಯವರು ತಲೆ ತಿರುಗಿ ಬಿದ್ದ ತಕ್ಷಣ ಜಯಂತಿಯವರು ಕಾರು ಚಲಾಯಿಸಿಕೊಂಡು ಬಂದಾಗ ಲೀಲಾವತಿಯವರಿಗೆ ತಾಗಿದ ದೃಶ್ಯದ ಚಿತ್ರೀಕರಣವನ್ನು ಚಿತ್ರಿಸಲಾಗಿತ್ತು. ಈ 'ತುಂಬಿದ ಕೊಡ'ದ ಚಿತ್ರೀಕರಣದಲ್ಲಿ ನಟಿ ಲೀಲಾವತಿಯವರು ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿರುವ ಶ್ರೀರಾಮ ದೇವಸ್ಥಾನದ ಮುಂದೆ ನಡೆದುಕೊಂಡು ಹೋಗುವುದು, ನಗರಸಭೆ (ಇಂದಿನ ಮಹಾನಗರ ಪಾಲಿಕೆ) ಮುಂದೆ ನಡೆದಾಡುವುದು, ಬಳಿಕ ಪಿಬಿ ರಸ್ತೆಯಲ್ಲಿರುವ ರಾಜನಹಳ್ಳಿ ಹನುಮಂತಪ್ಪ ಛತ್ರದ ಮುಂದೆ ಬರುವುದು ಹಾಗೂ ಹಳೇ ದಾವಣಗೆರೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯ ಮುಂದೆ ಸಾಗುವ ವೇಳೆ ಲೀಲಾವತಿಯವರಿಗೆ ಕಾರು ಅಪಘಾತ ಆಗುವ ಸನ್ನಿವೇಶ ಅದಾಗಿತ್ತು. ಹೀಗೆ ಈ 'ತುಂಬಿದ ಕೊಡ' ಚಿತ್ರಕ್ಕೆ ತಿರುವು ಕೊಡುವ ದೃಶ್ಯವನ್ನು ಇಲ್ಲಿನ ಪರಿಸರದಲ್ಲಿ ಸೆರೆ ಹಿಡಿಯಲಾಗಿತ್ತು.
ಕ್ಷಾಮ ತಲೆದೋರಿದಾಗ ನಿಧಿ ಸಂಗ್ರಹಕ್ಕೆ ಆಗಮಿಸಿದ್ದ ಲೀಲಾವತಿ:ಬಿಹಾರದಲ್ಲಿ ಕ್ಷಾಮ ಬಂದಾಗ ರಾಜ್ಯದ ಸಿನಿ ದಿಗ್ಗಜರು ಹಾಗೂ ಕಲಾವಿದರು ರಾಜ್ಯಾದ್ಯಂತ ಸಂಚರಿಸಿ ನಿಧಿ ಸಂಗ್ರಹ ಮಾಡಿ ಕಳುಹಿಸಿಕೊಟ್ಟಿರುವ ಉದಾಹರಣೆ ಇದೆ. ಈ ವೇಳೆ 90ರ ದಶಕದ ಸಿನಿಮಾ ನಟ-ನಟಿಯರು ನಿಧಿ ಸಂಗ್ರಹಕ್ಕೆ ಜಾಥದೊಂದಿಗೆ ದಾವಣಗೆರೆಗೆ ಆಗಮಿಸಿದ್ದರು. ಈ ವೇಳೆ ಡಾ. ರಾಜ್ಕುಮಾರ್, ಜಯಂತಿ, ಪಂಡರಿಬಾಯಿ, ಬಾಲಕೃಷ್ಣ, ಲೀಲಾವತಿ, ನರಸಿಂಹರಾಜು ಸೇರಿದಂತೆ ಸಾಕಷ್ಟು ಜನ ಆಗಮಿಸಿದ್ದರು.