ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಎದುರಾಗುವ ಹಬ್ಬ ಎಂದರೆ ಅದು ಸಂಕ್ರಾಂತಿ. ಈ ಸಂಕ್ರಮಣ ಹಬ್ಬ ಅಂದ್ರೆ ಸಂಭ್ರಮ. ಸಂಭ್ರಮ ಅಂದ್ಮೇಲೆ ಒಂದಿಷ್ಟು ಆತ್ಮೀಯರು ಸೇರಬೇಕು. ಎಲ್ಲರೂ ಸೇರಿದಾರೆ ಅಂದ್ರೆ ಅಲ್ಲೊಂದು ಚೆಂದದ ಹಾಡು ಇರ್ದಿದ್ರೆ ಹೇಗೆ?. ಇನ್ನೇನು ಕೆಲವೇ ದಿನ ಸಂಕ್ರಾಂತಿ ಹಬ್ಬ ಬರುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಒಂದು ಚೆಂದದ ಸಾಂಗ್ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಎಂದು ಯೋಚಿಸುವ ಮಂದಿ ಹಲವು. ಇಂತಹ ಆಲೋಚನೆಯಲ್ಲೇ ಹಾಡೊಂಡು ಸಿದ್ಧವಾಗಿ ಬಿಡುಗಡೆಯಾಗಿದೆ. ಒಂದಿಷ್ಟು ಸಂಗೀತಪ್ರಿಯ ಮನಸ್ಸುಗಳು ಒಟ್ಟಿಗೆ ಸೇರಿ ಸಂಕ್ರಾಂತಿ ಹಬ್ಬಕೆಂದು ಹೊಸ ಹಾಡೊಂದನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ.
ಸಂಕ್ರಾಂತಿ ಹಬ್ಬದಂದು ಅನೇಕ ಚಿತ್ರಗಳು ಬಿಡುಗಡೆಯಾಗುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿ ಎಂಬಂತೆ ಸಂಕ್ರಾಂತಿ ಹಬ್ಬಕ್ಕಾಗಿ ಹಳ್ಳಿ ಸೊಗಡಿನ ಹಾಡೊಂದು ಕನ್ನಡದಲ್ಲಿ ಸಿದ್ಧಪಡಿಸಲಾಗಿದೆ. ಸಂಕ್ರಾಂತಿ ಹಬ್ಬಕ್ಕೆಂದೇ ವಿಶೇಷವಾಗಿ ರಚಿಸಲಾದ ‘ಸಂಕ್ರಾಂತಿ ತಕಥೈ’ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡಿಗೆ ಹರ್ಷಿಕಾ ಪೂಣಚ್ಚ, ರಾಧಿಕಾ ನಾರಾಯಣ್, ಪೃಥ್ವಿ ಅಂಬರ್ ಹಾಗೂ ತೆಲುಗಿನ ಮಾನಸ್ ನಗುಲಪಲ್ಲಿ, ಕೀರ್ತಿ ಭಟ್, ನಿಖಿಲ್ ಮಲಿಯಕ್ಕಳ್ ಹೆಜ್ಜೆ ಹಾಕಿದ್ದಾರೆ. ಖ್ಯಾತ ನಟ ಡಾ.ರಮೇಶ್ ಅರವಿಂದ್ ಅವರು ಸ್ಪೆಷಲ್ ಅಪಿಯರೆನ್ಸ್ ಇರುವ ಈ ಹಾಡು ಬಿಡುಗಡೆಯಾಗಿ ಸಂಕ್ರಾಂತಿ ಹಬ್ಬದ ರಂಗು ಹೆಚ್ಚಿಸಿದೆ.