ಕರ್ನಾಟಕ

karnataka

ETV Bharat / entertainment

ಕನ್ನಡದಲ್ಲೊಂದು ವಿನೂತನ ರಿಯಾಲಿಟಿ ಶೋ; ಅಲ್ಲಿ ಬಿಗ್​ಬಾಸ್, ಇಲ್ಲಿ ಫಿಟ್​ಬಾಸ್! - etv bharat kannada

ಆಯೂಷ್​ ಟಿವಿ ಹಾಗೂ ಸಿರಿಕನ್ನಡ ವಾಹಿನಿ ಸಹಯೋಗದಲ್ಲಿ 'ಫಿಟ್​ಬಾಸ್'​ ಎಂಬ ಹೊಸ ರಿಯಾಲಿಟಿ ಶೋ ಶೀಘ್ರದಲ್ಲೇ ಆರಂಭವಾಗಲಿದೆ.

Kannada reality show fitboss
ಕನ್ನಡದಲ್ಲೊಂದು ವಿನೂತನ ರಿಯಾಲಿಟಿ ಶೋ; ಅಲ್ಲಿ ಬಿಗ್​ಬಾಸ್, ಇಲ್ಲಿ ಫಿಟ್​ಬಾಸ್!

By ETV Bharat Karnataka Team

Published : Oct 12, 2023, 6:26 PM IST

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಆದರೆ, ಇದೇ ಮೊದಲ ಬಾರಿಗೆ ಆಯೂಷ್​ ಟಿವಿ ಹಾಗೂ ಸಿರಿಕನ್ನಡ ವಾಹಿನಿ ಸಹಯೋಗದಲ್ಲಿ ಕಿರುತೆರೆ ವೀಕ್ಷಕರ ಹಿತದೃಷ್ಟಿಯಿಂದ ಒಂದು ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದೆ. ಫಿಟ್​ಬಾಸ್​ ಎಂಬ ಹೊಸ ರಿಯಾಲಿಟಿ ಶೋ ಶೀಘ್ರದಲ್ಲೇ ಆರಂಭವಾಗಲಿದೆ.

ಈ ಬಗ್ಗೆ ಆಯೂಷ್​ ಟಿವಿ ವೈಸ್​ ಚೇರ್ಮನ್​ ಅರುಣಾಚಲಂ, ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ, ​ಕ್ಷೇಮವನದ ಮುಖ್ಯ ಕ್ಷೇಮಾಧಿಕಾರಿ ಡಾ.ನರೇಂದ್ರ ಶೆಟ್ಟಿ, ಕಲಾವಿದ ಪ್ರಶಾಂತ್‌ ಸಂಬರ್ಗಿ, ಫಿಟ್​​ಬಾಸ್‌ ರಿಯಾಲಿಟಿ ಶೋ ನಿರ್ದೇಶಕ ಬಾಲಕೃಷ್ಣ ಹಾಗೂ ಆಯೂಷ್ ವಾಹಿನಿ ಮುಖ್ಯಸ್ಥರಾದ ರಾಜೇಶ್‌ ರಾಜಘಟ್ಟ ಮತ್ತು ದಿವ್ಯ ಮಾಹಿತಿ ಹಂಚಿಕೊಂಡರು.

ಮೊದಲಿಗೆ ಮಾತು ಆರಂಭಿಸಿದ ಆಯೂಷ್​ ಟಿವಿ ವೈಸ್​ ಚೇರ್ಮನ್​ ಅರುಣಾಚಲಂ, "ಆಯೂಷ್‌ ಟಿವಿ ಕಳೆದ 7 ವರ್ಷಗಳಿಂದ 'ಆರೋಗ್ಯಕರ ಜೀವನ ಶೈಲಿಗಾಗಿ' ಎಂಬ ಧ್ಯೇಯದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನ್ನಣೆ ಗಳಿಸಿರುವ ಏಕೈಕ ಆರೋಗ್ಯದ ಕುರಿತಾದ ವಾಹಿನಿಯಾಗಿದೆ. ಪ್ರಸ್ತುತ ಕರ್ನಾಟಕದ ಜನಪ್ರಿಯ ಮನೋರಂಜನಾ ವಾಹಿನಿ ಸಿರಿಕನ್ನಡ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ ಅಂದರೆ ಕ್ಷೇಮವನ ಇವರ ಸಹಭಾಗಿತ್ವದಲ್ಲಿ ಆಯೋಜಿಸಿರುವ ವಿಶ್ವದ ಮೊಟ್ಟ ಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಶೋ 'ಫಿಟ್​​​ಬಾಸ್‌'. 'ಮನುಷ್ಯನಿಗೆ ಎಲ್ಲದಕ್ಕಿಂತ ಆರೋಗ್ಯವೇ ಹೆಚ್ಚು' ಎಂಬ ಧ್ಯೇಯದಿಂದ ನಮ್ಮ ಆಯೂಷ್ ಟಿವಿ ಆರೋಗ್ಯದ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಸ್ಥೂಲಕಾಯದವರಿಗಾಗಿ 'ಫಿಟ್​ಬಾಸ್' ಎಂಬ ರಿಯಾಲಿಟಿ ಶೋ ಆರಂಭಿಸಲಾಗಿದೆ. ಇದು ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೆ" ಎಂದು ತಿಳಿಸಿದರು.

ಕನ್ನಡದಲ್ಲೊಂದು ವಿನೂತನ ರಿಯಾಲಿಟಿ ಶೋ!

ಬಳಿಕ ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ ಮಾತನಾಡಿ, "ಕಳೆದ ಕೆಲವು ವರ್ಷಗಳಿಂದ ನಮ್ಮ ಸಿರಿಕನ್ನಡ ವಾಹಿನಿ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆ ಪಡೆದಿದೆ. ಪ್ರಸ್ತುತ ಆಯೂಷ್ ಟಿವಿಯ 'ಫಿಟ್​ಬಾಸ್' ರಿಯಾಲಿಟಿ ಶೋ ಜೊತೆಗೆ ಕೈ ಜೋಡಿಸಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ರಿಯಾಲಿಟಿ ಶೋ ಅಕ್ಟೋಬರ್ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಆಯೂಷ್ ಟಿವಿಯಲ್ಲಿ ಸಂಜೆ 7ಕ್ಕೆ ಹಾಗೂ ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ಜನರಿಗೆ ಇಷ್ಟ ಆಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಈ ರಿಯಾಲಿಟಿ ಶೋ‌ನ ಆಡಿಷನ್​ನಲ್ಲಿ ಸುಮಾರು 2000 ಜನ ಪಾಲ್ಗೊಂಡಿದ್ದರು. ಅದರಲ್ಲಿ ಸುಮಾರು 100 ಕೆ.ಜಿಗಿಂತ ಹೆಚ್ಚು ತೂಕವಿರುವ 21 ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇಪ್ಪತ್ತೊಂದು ದಿನ, ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಇಲ್ಲಿ ಪಾಲ್ಗೊಂಡಿದ್ದು ವಿಶೇಷ. ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಕ್ಯೂರ್‌ ಮಾಡಿಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ಈ ರಿಯಾಲಿಟಿ ಶೋನಲ್ಲಿ ಕಲಿತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ರೂಪಿಕಾ, ನಿರೂಪಕ ಮುರಳಿ, ಆರ್ಯನ್ ಶಾಮ್ ಮುಂತಾದ ಗಣ್ಯರು ಗ್ರ್ಯಾಂಡ್ ಫಿನಾಲೆಗೆ ಆಗಮಿಸಿ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಗೆದ್ದ ಸ್ಪರ್ಧಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು" ಎಂದು ಫಿಟ್​ಬಾಸ್ ರಿಯಾಲಿಟಿ ಶೋ‌ ನಿರ್ದೇಶಕ ಬಾಲಕೃಷ್ಣ ತಿಳಿಸಿದರು.

"21 ದಿನಗಳ ಕಾಲ ಪ್ರತಿ ದಿನ ಮುಂಜಾನೆ 5ರಿಂದ ಯೋಗದೊಂದಿಗೆ ಸಾಧಕರ ದಿನಚರಿ ಪ್ರಾರಂಭವಾದರೆ, ಕ್ರಮೇಣ ವಿವಿಧ ನ್ಯಾಚುರೋಪತಿ ಚಿಕಿತ್ಸೆಗಳು ಹಾಗೂ ಹಲವು ಮನೋರಂಜನಾ ಕಾರ್ಯಕ್ರಮಗಳು ಸ್ಪರ್ಧಿಗಳನ್ನು ಕ್ರಿಯಾಶೀಲರನ್ನಾಗಿಸಿರುವಂತೆ ಮಾಡುತ್ತದೆ" - ಡಾ.ನರೇಂದ್ರ ಶೆಟ್ಟಿ, ಕ್ಷೇಮವನದ ಮುಖ್ಯ ಕ್ಷೇಮಾಧಿಕಾರಿ

ಫಿಟ್​ಬಾಸ್ ಎಂಬ ರಿಯಾಲಿಟಿ ಶೋನ ಆರಂಭದ ದಿನ ಹಾಗೂ ಫಿನಾಲೆ ದಿನ ನಿರೂಪಕರಾಗಿ ಕೆಲಸ ಮಾಡಿರುವ ಪ್ರಶಾಂತ್ ಸಂಬರ್ಗಿ ಮಾತನಾಡಿ, ಈ ಶೋ ವಿಶ್ವದ ಜನರ ಗಮನ ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಈ ತಿಂಗಳಲ್ಲೇ 'ಕಾಫಿ ವಿತ್ ಕರಣ್' ಸೀಸನ್​ 8 ಆರಂಭ: ಮಾಹಿತಿ ಇಲ್ಲಿದೆ..

ABOUT THE AUTHOR

...view details