ಬೆಂಗಳೂರು: ಕನ್ನಡದ ಜನಪ್ರಿಯ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆ.ಸಿ.ಎನ್ ಮೋಹನ್ (61) ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ಇವರು ಕೆ.ಸಿ.ಎನ್. ಚಂದ್ರಶೇಖರ್ ಅವರ ಸಹೋದರ. ಮೋಹನ್ ಅವರಿಗೆ ಇತ್ತೀಚೆಗಷ್ಟೇ ಲಿವರ್ ಕಸಿ ಮಾಡಲಾಗಿತ್ತು. ಇವರ ಸಹೋದರ ಚಂದ್ರಶೇಖರ್ ಅಗಲಿದ ವರ್ಷದಲ್ಲೇ ಮೋಹನ್ ಅವರೂ ಸಹ ಅಗಲಿದ್ದು, ಕುಟುಂಬಕ್ಕೆ ಆಘಾತ ತರಿಸಿದೆ. ಕೆ.ಸಿ.ಎನ್. ಮೋಹನ್ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ
ಕೆ.ಸಿ.ಎನ್ ಗೌಡರ ಪುತ್ರರಾಗಿದ್ದ ಮೋಹನ್ 2017ರಲ್ಲಿ ಪತ್ನಿ ಪೂರ್ಣಿಮಾ ಅವರನ್ನು ಕಳೆದುಕೊಂಡಿದ್ದರು. 2006ರಲ್ಲಿ ಮೋಹನ್ 'ಜೂಲಿ' ಚಿತ್ರವನ್ನು ನಿರ್ಮಿಸಿದ್ದರು. ಇದನ್ನು ಪೂರ್ಣಿಮಾ ಮೋಹನ್ (ಅವರ ಪತ್ನಿ) ನಿರ್ದೇಶಿಸಿದ್ದರು. ಇದು 1967 ರ ಹಿಂದಿ ಸಿನಿಮಾ 'ಜೂಲಿ'ಯ ರಿಮೇಕ್ ಆಗಿತ್ತು. ಇಬ್ಬರು ಸಹೋದರರಾದ ಕೆ.ಸಿ.ಎನ್. ಚಂದ್ರಶೇಖರ್ ಮತ್ತು ಕೆ.ಸಿ.ಎನ್. ಮೋಹನ್ ಅವರು ವಿಷ್ಣುವರ್ಧನ್, ಮಹಾಲಕ್ಷ್ಮಿ, ವಜ್ರಮುನಿ ಮತ್ತು ಎನ್ಎಸ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ 'ಜಯಸಿಂಹ' ಚಿತ್ರವನ್ನು ನಿರ್ಮಿಸಿದ್ದರು.
1990ರಲ್ಲಿ ಡಿ. ರಾಜೇಂದ್ರ ಬಾಬು ನಿರ್ದೇಶನದ 'ರಾಮರಾಜ್ಯದಲ್ಲಿ ರಾಕ್ಷಸರು' ಚಿತ್ರವನ್ನು ನಿರ್ಮಿಸಿದರು. ಈ ಚಿತ್ರವು ಎಂ. ರಂಗ ರಾವ್ ಅವರ ಸಂಗೀತ ಸಂಯೋಜನೆಯನ್ನು ಹೊಂದಿತ್ತು. ಇದು ಬಹುತಾರಾಗಣವನ್ನು ಹೊಂದಿತ್ತು. ಶಂಕರ್ ನಾಗ್, ಅನಂತ್ ನಾಗ್, ಸೋನಿಕಾ ಗಿಲ್ ಮತ್ತು ಗಾಯತ್ರಿ ಪ್ರಮುಖ ಪಾತ್ರಗಳಲ್ಲಿದ್ದ ಚಿತ್ರವದು. ಈ ಸಿನಿಮಾ ಅಚ್ಚುಕಟ್ಟಾದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಅದೇ ವರ್ಷದಲ್ಲಿ ಸಹೋದರರು ನಿರ್ಮಿಸಿದ 'ಭಲೇ ಚತುರ' ಚಿತ್ರದಲ್ಲಿ ಓಂ ಸಾಯಿಪ್ರಕಾಶ್, ಶಂಕರ್ ನಾಗ್, ಚಂದ್ರಿಕಾ, ಬಿ ಸರೋಜಾದೇವಿ, ಸಿಹಿಕಹಿ ಗೀತಾ, ಪಂಡರಿಬಾಯಿ, ಸಾರಿಕಾ, ಶ್ರೀನಿವಾಸಮೂರ್ತಿ, ಮೈಸೂರು ಲೋಕೇಶ್ ಕಾಣಿಸಿಕೊಂಡಿದ್ದರು.