2023ನೇ ವರ್ಷದಲ್ಲಿ ಕನ್ನಡ ಚಿತ್ರರಂಗದ ಎರಡ್ಮೂರು ಸಿನಿಮಾಗಳಷ್ಟೇ ಹಿಟ್ ಆಗಿವೆ. 200ಕ್ಕೂ ಹೆಚ್ಚು ಚಿತ್ರಗಳು ತೆರೆ ಕಂಡಿದ್ದರೂ ಸಹ ಹಿಟ್ ಪಡೆದುಕೊಂಡಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು. ಈ ವಸಂತಕ್ಕೆ ವಿದಾಯ ಹೇಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಮಧ್ಯೆ ಕನ್ನಡದ ಹೆಚ್ಚಿನ ಸ್ಟಾರ್ ನಟರ ಸಿನಿಮಾಗಳು 2024ಕ್ಕೆ ತೆರೆಗೆ ಅಪ್ಪಳಿಸಲು ಅಣಿಯಾಗುತ್ತಿದೆ. ಇದರ ಜೊತೆಗೆ ಹೊಸಬರ ಸಿನಿಮಾಗಳು ಕೂಡ ಬೆಳ್ಳಿ ತೆರೆ ಮೇಲೆ ಕಮಾಲ್ ಮಾಡುವ ನಿರೀಕ್ಷೆ ಇದೆ.
ಮ್ಯಾಕ್ಸ್: ಮುಂದಿನ ವರ್ಷಕ್ಕೆ ಸಿನಿಮಾ ಚಿತ್ರಣ ಬದಲಾಗಲಿದೆ ಎಂಬ ನಿರೀಕ್ಷೆ ಗಾಂಧಿನಗರದ ಸಿನಿಮಾ ಪಂಡಿತರಲ್ಲಿದೆ. ಈ ಮಾತಿಗೆ ಪೂರಕವಾಗಿ ಹೊಸ ವರ್ಷದ ಹೊಸ್ತಿಲಲ್ಲಿ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಚಿತ್ರ ಬಿಡುಗಡೆ ಆಗಲಿದೆ. 'ವಿಕ್ರಾಂತ್ ರೋಣ' ನಂತರ ಕಿಚ್ಚನ ಯಾವುದೇ ಸಿನಿಮಾಗಳು ಬಂದಿಲ್ಲ. ಇದೀಗ 'ಮ್ಯಾಕ್ಸ್'ಗಾಗಿ ತಮಿಳು ನಿರ್ದೇಶಕರೊಂದಿಗೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಸುದೀಪ್ ಹುಟ್ಟುಹಬ್ಬದಂದು ಚಿತ್ರತಂಡ ಟೈಟಲ್ ಅನ್ನು ಹಂಚಿಕೊಂಡಿತ್ತು. ಇದು ಸಿನಿ ಪ್ರೇಮಿಗಳು 'ಮ್ಯಾಕ್ಸ್'ಗಾಗಿ ಕಾತರದಿಂದ ಕಾಯುವಂತೆ ಮಾಡಿದೆ.
ಮಾರ್ಟಿನ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 2019ರಲ್ಲಿ 'ಪೊಗರು' ಚಿತ್ರ ಮಾಡಿದ್ದು ಬಿಟ್ಟರೆ ಮತ್ಯಾವುದೇ ಸಿನಿಮಾಗಳು ಮಾಡಿಲ್ಲ. ಮುಂದಿನ ವರ್ಷ 'ಮಾರ್ಟಿನ್' ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದೆ. ಈ ಸಿನಿಮಾ ಖಂಡಿತವಾಗಿಯೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡುತ್ತೆ ಅನ್ನೋದು ಸಿನಿ ಪಂಡಿತರ ಬಲವಾದ ನಂಬಿಕೆ.
ಕರಟಕ ಧಮನಕ: ಹ್ಯಾಟ್ರಿಕ್ ಹೀರೋ ಮುಂದಿನ ವರ್ಷವೂ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ವರ್ಷ ಕಾಲಿವುಡ್ ನಟ ರಜನಿಕಾಂತ್ ಮುಖ್ಯಭೂಮಿಕೆಯ 'ಜೈಲರ್' ಸಿನಿಮಾದಲ್ಲಿ ನಟಿಸಿ ಅದ್ಭುತ ಯಶಸ್ಸು ಕಂಡಿದ್ದಾರೆ. 'ಘೋಸ್ಟ್' ಚಿತ್ರಕ್ಕೂ ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಕ್ಕಿದೆ. ಇದೀಗ ಮೊದಲ ಬಾರಿಗೆ ಶಿವಣ್ಣ ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸಲಿದ್ದಾರೆ. 'ಕರಟಕ ಧಮನಕ' ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದ್ದು, ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಭೈರತಿ ರಣಗಲ್: 'ಭೈರತಿ ರಣಗಲ್' ಕೂಡ ಶಿವಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರವು ಮುಂದಿನ ವರ್ಷ ತೆರೆ ಕಾಣುವುದು ಕನ್ಫರ್ಮ್ ಆಗಿದೆ. ಭೈರತಿ ಲುಕ್ನಲ್ಲಿ ಶಿವಣ್ಣನ ನೋಡಲು ನಾಲ್ಕೈದು ವರ್ಷಗಳಿಂದ ಕಾಯುತ್ತಿದ್ದ ಶಿವ ಸೈನ್ಯವು, ಚಿತ್ರವನ್ನು ಹೊತ್ತು ಮೆರೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.