ಯುವತಾರಾ ದಂಪತಿ 'ಸಿಂಹಪ್ರಿಯಾ' ಜೋಡಿ ಒಂದಾಗಿ ನಟಿಸಿರುವ ಮತ್ತು ನೆಗೆಟಿವ್ ರೋಲ್ ಆದರೂ ಮುಖ್ಯ ಪಾತ್ರದಲ್ಲಿ ಹರಿಪ್ರಿಯಾ ನಟಿಸಿರುವ ಕುತೂಹಲಕಾರಿ ಸಿನಿಮಾ 'ಯದಾ ಯದಾಹಿ' ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಸಿನಿಮಾದ ಪ್ರೀಮಿಯರ್ ಶೋ ಇಂದು ನಡೆಯಲಿದ್ದು, ಅಭಿಮಾನಿಗಳು 1 ರೂಪಾಯಿ ನೀಡಿ ನೋಡಬಹುದು.
ಹೌದು, ಸಿನಿಮಾ ತಂಡ ಪ್ರೀಮಿಯರ್ ಶೋಗೆ 1 ರೂಪಾಯಿ ದರ ನಿಗದಿ ಮಾಡಿದೆ. ಬುಧವಾರ (ಮೇ 31) ಸಂಜೆ ಬೆಂಗಳೂರಿನ ವೀರೇಶ್ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಸುಧಾ ಚಿತ್ರಮಂದಿರಗಳಲ್ಲಿ ಒಂದು ರೂಪಾಯಿ ಪ್ರವೇಶ ದರ ನೀಡಿ ಸಿನಿಮಾ ನೋಡುವ ಅವಕಾಶವನ್ನು ನಿರ್ಮಾಪಕರು ಒದಗಿಸಿದ್ದಾರೆ.
ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಪ್ರೀಮಿಯರ್ ಶೋ ಟಿಕೆಟ್ ದರವನ್ನು 1 ರೂಪಾಯಿಗೆ ನಿಗದಿ ಮಾಡಲಾಗಿದೆ. ಇಂಥದ್ದೊಂದು ಅವಕಾಶವನ್ನು ನಿರ್ಮಾಪಕರು ಕನ್ನಡ ಸಿನಿಮಾ ಪ್ರೇಕ್ಷಕರು ಮತ್ತು ಅಭಿಮಾನಿಗಳಿಗೆ ಒದಗಿಸಿ ಕೊಟ್ಟಿರುವುದು ಇದೇ ಮೊದಲಾಗಿದೆ.
ದೇಶದ ಬೇರೆ ಬೇರೆ ರಾಜ್ಯಗಳಿಗ ಹೋಲಿಸಿದರೆ ಕರ್ನಾಟಕ, ಅದರಲ್ಲಿಯೂ ಬೆಂಗಳೂರಿನಲ್ಲಿ ಟಿಕೆಟ್ ದರ ಅತ್ಯಂತ ದುಬಾರಿ ಎನ್ನುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಯದಾ ಯದಾಹಿ ಚಿತ್ರದ ನಿರ್ಮಾಪಕ ರಾಜೇಶ್ ಅಗರ್ ವಾಲ್ ಅವರು ಒಂದು ರೂಪಾಯಿ ಟಿಕೆಟ್ ದರ ನಿಗದಿ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಚಿತ್ರದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ ಮತ್ತು ದೂದ್ಪೇಡಾ ದಿಗಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಮೂಲದ ಅಶೋಕ ತೇಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹೈದರಾಬಾದ್‌ನ ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ರಾಜೇಶ್ ಅಗರ್ವಾಲ್ ಅವರು ನಿರ್ಮಾಣ ಮಾಡಿದ್ದಾರೆ. ಶಾಲಿನಿ ಎಂಟರ್‌ಪ್ರೈಸಸ್ ಮೂಲಕ ಜಾಕ್ ಮಂಜು ಅವರು ಈ ಚಿತ್ರವನ್ನು ರಿಲೀಸ್ ಮಾಡಲಿದ್ದಾರೆ. ಇನ್ನೂ ವಿಶೇಷ ಎಂದರೆ ಈ ಚಿತ್ರದ ಟೈಟಲ್ ಸಾಂಗ್ ಅನ್ನು ವಸಿಷ್ಠಸಿಂಹ ಹಾಗೂ ಹರಿಪ್ರಿಯಾ ಹಾಡಿದ್ದಾರೆ.
ಜೂನ್ 2 ರಂದು ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲು ವಿಶೇಷ ಪ್ರಿಮಿಯರ್ ಶೋ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ನಟಿ, ನಟಿಯರು ಸಿನಿಮಾದ ಪೋಸ್ಟರ್ ಅನ್ನು ಟ್ವೀಟ್ ಮಾಡಿಕೊಂಡಿದ್ದು, 1 ರೂಪಾಯಿಗೆ ಪ್ರೀಮಿಯರ್ ಶೋ ಇದ್ದು, ಸಿನಿಮಾವನ್ನು ವೀಕ್ಷಿಸಿ ಹರಸಬೇಕು ಎಂದು ಕೋರಿದ್ದಾರೆ.
ಇನ್ನೂ, ಸಿನಿಮಾದ ಟ್ರೈಲರ್ಗೂ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡ ಚಿತ್ರರಂಗದ ಯುವ ನಟರಾದ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಅವರ ನಟನೆ ಉತ್ತಮವಾಗಿದೆ ಎಂದು ಸಿನಿಮಾ ಮಂದಿ ಹೇಳುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ 'ಯದಾ ಯದಾಹಿ' ಸಿನಿಮಾದ ಟ್ರೈಲರ್ ಸಾಕಷ್ಟು ವೀಕ್ಷಣೆಗೂ ಒಳಪಟ್ಟಿದೆ. ದಂಪತಿಯ ಕಾಂಬಿನೇಷನ್ ಸಿನಿಮಾ ಜನರಿಗೆ ಇಷ್ಟವಾಗಲಿದೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಪವರ್ಸ್ಟಾರ್ ಪವನ್ ಕಲ್ಯಾಣ್ ರಾಯಲ್ ಲೈಫ್ ಸ್ಟೈಲ್: ಅವರು ಧರಿಸಿರುವ ಈ ಶೂಗಳ ಬೆಲೆ ಎಷ್ಟು ಗೊತ್ತಾ?