ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ದಿವಂಗತ ಪುನೀತ್ ರಾಜ್‍ಕುಮಾರ್ ಬೆಂಬಲ ಸೂಚಿಸುತ್ತಿದ್ದದ್ದು ನಿಮಗೆ ತಿಳಿದಿರುವ ವಿಚಾರ. ಈಗ ಅದೇ ಮಾರ್ಗದಲ್ಲಿ ಅವರ ಪತ್ನಿ ಹೆಜ್ಜೆ ಇಡುತ್ತಿದ್ದಾರೆ. ಪವರ್ ಸ್ಟಾರ್ ಕನಸುಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ನನಸು ಮಾಡುತ್ತಿದ್ದಾರೆ.
ಕಾಕ್ಟೈಲ್ ಟ್ರೈಲರ್ ರಿಲೀಸ್:ಹೌದು, ಕ್ಯಾಚೀ ಟೈಟಲ್ ಹೊಂದಿರುವ ಕಾಕ್ಟೈಲ್ ಸಿನಿಮಾದ ಟ್ರೈಲರ್ ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡುವ ಮೂಲಕ ಹೊಸ ಪ್ರತಿಭೆಗಳಿಗೆ ಬೆಂಬಲ ಸೂಚಿಸಿದ್ದಾರೆ. ಟ್ರೈಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಈ ಚಿತ್ರತಂಡಕ್ಕೆ ಸಾಥ್ ನೀಡಿದರು.
ಯುವ ನಟನ ಎಂಟ್ರಿ: ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮೊದಲಿಗೆ ಮಾತನಾಡಿದ ನಿರ್ದೇಶಕ ಶ್ರೀರಾಮ್, ನನಗೆ ಸುಮಾರು ಹದಿನೈದು ವರ್ಷಗಳಿಂದ ಚಿತ್ರ ರಂಗದ ಜೊತೆ ನಂಟಿದೆ. ಕಾಕ್ಟೈಲ್ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ಒಂದೇ ಜಾನರ್ನ ಚಿತ್ರವಲ್ಲ. ಈ ಚಿತ್ರದಲ್ಲಿ ಲವ್, ಹಾರರ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಕನ್ನಡದಲ್ಲಿ ಇದು ಹೊಸ ನರೇಶನ್ ಸಿನಿಮಾ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಕೆಲವು ಸ್ನೇಹಿತರು ಸಹ ಮೆಚ್ಚುಗೆ ಸೂಚಿಸಿದ್ದಾರೆ.
ಚಿತ್ರ ಉತ್ತಮವಾಗಿ ಬರಲು ಕಾರಣ ನನ್ನ ತಂಡ. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ನಿರ್ಮಾಪಕ ಡಾ. ಶಿವಪ್ಪ ಅವರ ಮಗ ವೀರೆನ್ ಕೇಶವ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಅಂತಾ ಹೇಳಿದರು.
ಎಲ್ಲಾ ಭಾವನೆಗಳನ್ನೊಳಗೊಂಡ ಸಿನಿಮಾ:ಯುವ ನಟ ವೀರೆನ್ ಕೇಶವ್ ಮಾತನಾಡಿ, ನಾಲ್ಕೈದು ಡ್ರಿಂಕ್ಸ್ಗಳ ಮಿಶ್ರಣಕ್ಕೆ "ಕಾಕ್ಟೈಲ್" ಎನ್ನುತ್ತಾರೆ. ನಮ್ಮ ಸಿನಿಮಾದಲ್ಲೂ ಹಾಗೆ. ಲವ್ ಇದೆ, ಹಾಗಂತ ಲವ್ ಜಾನರ್ ಸಿನಿಮಾ ಅಲ್ಲ. ಸೆಂಟಿಮೆಂಟ್ ಇದೆ. ಆದರೆ, ಸೆಂಟಿಮೆಂಟ್ ಸಿನಿಮಾ ಅಲ್ಲ. ಎಲ್ಲ ಅಂಶಗಳನ್ನು ಒಳಗೊಂಡಿರುವ ವಿಭಿನ್ನ ಸಿನಿಮಾ ನಮ್ಮದು. ವಿಕ್ರಮ್ ಎಂಬುದು ನನ್ನ ಪಾತ್ರದ ಹೆಸರು. ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಧನ್ಯವಾದ ಎಂದು ಹೇಳಿದರು.